
ಕಲಬುರಗಿ:ನ.7: ಇತ್ತೀಚಿನ ದಿವಸಗಳಲ್ಲಿ ಮಾನವನಿಗೆ ಬಹಳ ಕಾಡುತ್ತಿರುವ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಪ್ರಮುಖವಾದ ಧಾತು ರೇಡಿಯಂ ಸಂಶೋಧಿಸಿ, ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ತಮ್ಮ ಜೀವವನ್ನೇ ನೀಡಿದ ವಿಶ್ವದ ಪ್ರಥಮ ಮಹಿಳಾ ವಿಜ್ಞಾನಿ, ನೋಬೆಲ್ ಪ್ರಶಸ್ತಿ ಪುರಸ್ಕøತೆ ಮೇಡಂ ಕ್ಯೂರಿ ಮನುಕುಲಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಶಿವಾ ಮತ್ತು ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ಮೇಡಂ ಮೇರಿ ಕ್ಯೂರಿ ಅವರ 156ನೇ ಜನ್ಮ ದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ರೇಡಿಯಂ ಬಹು ಉಪಯೋಗಿ ವಿಕಿರಣಶೀಲ ಧಾತು ಆಗಿದೆ. ಇದರ ಸಂಶೋಧನೆಗೆ ಅವರು ಪಟ್ಟ ಶ್ರಮ ಹೆಚ್ಚಾಗಿದೆ. ತಮ್ಮ ಪತಿಯ ಜೊತೆಗೂಡಿ ನಿರಂತರವಾಗಿ ವಿಜ್ಞಾನ ಕ್ಷೇತ್ರ ಬೆಳೆಸಿದ್ದಾರೆ. ಒಬ್ಬ ಮಹಿಳೆಯಾಗಿ ಪುರುಷರಿಗಿಂತ ಕಡಿಮೆಯಿಲ್ಲ ಎಂದು ನೂರಾರು ವರ್ಷಗಳ ಹಿಂದೆ ಸಾಧಿಸಿ ತೋರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಶಾಲೆಯ ಶಿಕ್ಷಕರಾದ ಪ್ರೀತಿ ಜೆ.ಬಿರಾದಾರ, ಪೂರ್ಣಿಮಾ ಪಾಟೀಲ, ಪ್ರಿಯಾಂಕಾ ಪಿ.ಕೆ., ಕಾಶಮ್ಮ ಎಸ್.ಸಿ., ವರ್ಷಾರಾಣಿ ಆರ್., ಮಲ್ಲಮ್ಮ ಬಿ.ಕೆ., ಶಿಲ್ಪಾ ಎಸ್.ಕೆ., ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.