ಮನಸ್ಸು-ಮಾತು-ಕ್ರಿಯೆಗಳಲ್ಲಿ ಒಂದೇ ರೀತಿ ಬದುಕಿದ ಮಹಾಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿ: ಪಂ. ಮಧ್ವಾಚಾರ್ಯ ಮೊಕಾಶಿ

ವಿಜಯಪುರ, ಡಿ.26:ಜಗತ್ತಿನಲ್ಲಿ ಅನೇಕರು ದೊಡ್ಡವರಾಗುತ್ತಾರೆ. ಆದರೆ ಅವರು ತಮ್ಮ ಮನಸ್ಸಿನಲ್ಲಿಯೊ, ಮಾತಿನಲ್ಲಿಯೋ ಅಥವಾ ಕ್ರಿಯೆಯಲ್ಲಿಯೋ ಒಂದಕ್ಕೊಂದು ಸಂಬಂಧ ಇರದ ಹಾಗೆ ವರ್ತಿಸುತ್ತಾರೆ. ಸ್ವಲ್ಪ ಸಮಯ ದೊಡ್ಡವರೆನಿಸಿಕೊಂಡು ನಂತರ ಎಡವಿ ಬೀಳುತ್ತಾರೆ. ಆದರೆ ಸಿದ್ದೇಶ್ವರ ಶ್ರೀಗಳು ಜೀವಿತಾವಧಿವರೆಗೂ ಒಂದೇ ತೆರನಾಗಿ ಜೀವನ ಸಾಗಿಸಿದ ಸಂತರೆಂದರೆ ಸಿದ್ಧೇಶ್ವರ ಶ್ರೀಗಳು ಎಂದು ಪಂಡಿತ ಮಧ್ವಾಚಾರ್ಯ ಮೊಕಾಶಿ ಹೇಳಿದರು.

ನಗರದ ಚೇತನಾ ಶಿಕ್ಷಣ ಸಂಸ್ಥೆಯಲ್ಲಿ ಮಂಥನ ವಿಜಯಪುರ ಚಿಂತಕರ ಚಾವಡಿಯ ಮಾಸಿಕ ಕಾರ್ಯಕ್ರಮದಲ್ಲಿ ಸಿದ್ಧೇಶ್ವರ ಶ್ರೀಗಳಿಗೆ ನುಡಿ ನಮನ ಸಲ್ಲಿಸುತ್ತಾ ಈ ಮಾತುಗಳನ್ನಾಡಿದರು.

30 ವರ್ಷದ ಹಿಂದೆ ಮಲ್ಲಿಕಾರ್ಜುನ ಸ್ವಾಮಿಗಳು ಇದ್ದಾಗ ಪ್ರಥಮ ಬಾರಿ ಸಿದ್ಧೇಶ್ವರ ಸ್ವಾಮಿಗಳಿಗೆ ಭೇಟಿಯಾದ ದಿನಗಳನ್ನು ಅವರು ನೆನೆಸಿಕೊಂಡರು. ಉತ್ಸಾಹಿ ತರುಣರಾಗಿದ್ದ ಶ್ರೀಗಳು ಹೊಸದನ್ನು ಕಲಿಯಬೇಕು, ಹಿಂದೂ ಧರ್ಮ, ವೈದಿಕ ಶಾಸ್ತ್ರ, ಸನಾತನ ಪದ್ಧತಿಗಳು, ಉಪನಿಷತ್ ಸಾರ, ಗೀತಾ ವಿಶ್ಲೇಷಣೆ, ವಚನಗಳಲ್ಲಿ ಭಕ್ತಿಯ ವರ್ಣನೆ ಈ ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಸಂತರು ದೊಡ್ಡವರಾಗಬೇಕೆಂದರೆ ಇನ್ನೊಬ್ಬರ ಒಳ್ಳೆಯ ಗುಣಗಳನ್ನು ವರ್ಣಿಸಬೇಕು. ಇನ್ನೊಬ್ಬರಲ್ಲಿ ಯಾವುದೇ ಒಳ್ಳೆಯ ವಿದ್ಯೆ ಇದ್ದರೆ ಶ್ರೀಗಳು ತಮ್ಮ ಬೆಳಗಿನ ಪ್ರವಚನ ಸಮಯವನ್ನು ಅವರಿಗಾಗಿ ಕೊಟ್ಟು ಅವರಿಂದ ಪ್ರವಚನ ಮಾಡಿಸುತ್ತಿದ್ದರು. ಪೇಜಾವರ ಸ್ವಾಮಿಗಳು ಇಹಲೋಕವನ್ನು ತ್ಯಜಿಸಿದಾಗ ನನ್ನನ್ನು ಹೊರ್ತಿ ಗ್ರಾಮಕ್ಕೆ ಕರೆಸಿ ಚಳಿಗಾಲದ ತಂಪಿನಲ್ಲಿ ಎಂಟು ಹತ್ತು ಸಾವಿರ ಜನರ ಮಧ್ಯದಲ್ಲಿ ಪೇಜಾವರ ಸ್ವಾಮಿಗಳ ಬಗ್ಗೆ ನನ್ನಿಂದ ಪ್ರವಚನ ಮಾಡಿಸಿದರು. ಹೀಗೆ ಇನ್ನೊಬ್ಬರ ಬಗ್ಗೆ ಉದಾರ ಭಾವವನ್ನು ಇಟ್ಟುಕೊಂಡವರೇ ಶ್ರೇಷ್ಠ ಸಂತರೆನಿಸಿಕೊಳ್ಳುತ್ತಾರೆ. ಸಾದಾ ಜೀವನ ಉಚ್ಚ ವಿಚಾರಕ್ಕೆ ದೊಡ್ಡ ಉದಾಹರಣೆ ಸಿದ್ಧೇಶ್ವರ ಶ್ರೀಗಳೆಂದು ಕೊಂಡಾಡಿದರು.

ಅಧ್ಯಕ್ಷತೆ ವಹಿಸಿದ್ದ ಜ್ಞಾನ ಯೋಗಾಶ್ರಮದ ಅಧ್ಯಕ್ಷರು ಶ್ರೀ ಬಸವಲಿಂಗ ಸ್ವಾಮೀಜಿಯವರು ಶ್ರೀ ಸಿದ್ದೇಶ್ವರ ಶ್ರೀಗಳು ಹೇಗೆ ಜೀವನವನ್ನು ಆದರ್ಶಮಯವಾಗಿಸಿದರು ಎಂದು ವರ್ಣಿಸಿದರು.

ಶುಭಶ್ರೀ ಹೋಟೆಲ್ ಮಾಲೀಕ ಶಾಂತೇಶ ಕಳಸಗೊಂಡ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಪೂರ, ವೇದಾಂತ ಬಿಸಿಎ ಬಿಕಾಂ ಕಾಲೇಜಿನ ಅಧ್ಯಕ್ಷ ಶಾಂತವೀರಯ್ಯ ಮಠ, ಡಾ. ಬಾಬು ರಾಜೇಂದ್ರ ನಾಯಿಕ, ಮಯೂರ ಸಜ್ಜನ, ಚೇತನಾ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಕೆಂಗನಾಳ ನಿರೂಪಿಸಿದರು. ಸ್ವರ್ಣಿಮಾ ಗುಡೂರ ಪ್ರಾರ್ಥನಾ ಗೀತೆಯನ್ನು ಹಾಡಿದರು. ಪಿ ಬಿ ಕುಲಕರ್ಣಿ ಪರಿಚಯಿಸಿ ಸ್ವಾಗತಿಸಿದರು. ಚನ್ನು ಹುಣಶ್ಯಾಳ ವಂದಿಸಿದರು. ಶ್ರೀಶೈಲ ಹುಟಗಿ ವಂದೇ ಮಾತರಂ ಹಾಡಿದರು. ಮಂಥನ ಸಂಯೋಜಕ ಈರಣ್ಣ ಬಿರಾದಾರ, ಶ್ರೀಧರ ಪಾರಶೆಟ್ಟಿ, ಬಸವರಾಜ ದಂಡೋತಿ, ಮನೀಷಾ ಕುಲಕರ್ಣಿ, ಭುವನೇಶ್ವರಿ ಕೋರವಾರ, ದಾಕ್ಷಾಯಣಿ ಹೀರಾಪೂರ, ಗೋಪಾಲ ದೇಶಪಾಂಡೆ, ಎ.ಜಿ. ಢವಳಗಿಮಠ, ಎಚ್.ಎಸ್. ಗಿಡ್ಡನ್ನವರ, ವಿಜಯಕುಮಾರ ಬೆಳುಂಡಗಿ ಇನ್ನೂ ಅನೇಕ ಅಧ್ಯಾತ್ಮ ಬಂಧುಗಳು ಉಪಸ್ಥಿತರಿದ್ದರು.