ದಾವಣಗೆರೆ.ಜೂ.೨೧: ಯೋಗವು ಮನಸ್ಸು ಹಾಗೂ ದೇಹವನ್ನು ಸಂಪರ್ಕಿಸುವ ಕೊಂಡಿಯಾಗಿದ್ದು, ಬಿಡುವಿಲ್ಲದ ಕೆಲಸ ನಡುವೆ ಕೆಲ ಸಮಯ ಯೋಗಾಭ್ಯಾಸಕ್ಕೆ ಇಟ್ಟರೆ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸು ಉಲ್ಲಾಸ ಆಗುತ್ತದೆ. ಮಾತ್ರವಲ್ಲ ಇಡೀ ದಿನವು ಉತ್ಸಾಹದಿಂದ ಇರಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ರಾಜೇಶ್ವರಿ ಎನ್.ಹೆಗಡೆ ಅಭಿಪ್ರಾಯ ಪಟ್ಟರು.ದಾವಣಗೆರೆ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಆಯುಷ್ ಇಲಾಖೆ ಇವರ ಸಹಯೋಗದಲ್ಲಿ ನಗರದ ದೇವರಾಜ್ ಅರಸ್ ಬಡಾವಣೆಯಲ್ಲಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್ 21ರಂದು ವಿಶ್ವದಾದ್ಯಂತ ಬಹಳ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚಿನ ಜನರು ತಮ್ಮ ಮಾನಸಿಕ ಒತ್ತಡ ನಿವಾರಿಸಿಕೊಳ್ಳಲು ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚಿನ ಕಲೆಯಾಗಿದೆ ಎಂದರು.ಭಾರತವು ಇಡೀ ಜಗತ್ತಿಗೆ ನೀಡಿದ ಒಂದು ದೊಡ್ಡ ಕೊಡುಗೆ ಯೋಗವಾಗಿದೆ. ಯೋಗವು ಸುಮಾರು 6ಸಾವಿರ ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಪ್ರತಿವರ್ಷ ಯೋಗದ ದಿನಾಚರಣೆಯು ಯೋಗ, ಧ್ಯಾನ, ಸಭೆಗಳು, ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಸೇರಿದಂತೆ ಮಾನಸಿಕ ಒತ್ತಡ ನಿವಾರಿಸಲು ಯೋಗ ದಿನದಂದೇ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್ ಮಾತನಾಡಿ, ಯೋಗದ ಗುರಿಯು ಕೇವಲ ದೇಹವನ್ನು ಸರಿ ಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ದೀಕರಿಸಲು ನೆರವಾಗುತ್ತದೆ. ಇದು ನಾವು ಮತ್ತು ಪ್ರಕೃತಿ ಮಾತೆಯ ಜೊತೆ ಸಂರ್ಪಕವನ್ನು ಕಲ್ಪಿಸುತ್ತದೆ. ಇದು ನಮ್ಮನ್ನು ನಮ್ಮ ನೈಜತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ ಎಂದು ವಿವರಿಸಿದರು.ಯೋಗವು ವ್ಯಾಯಮ ಮಾತ್ರವಲ್ಲದೇ ನಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹವಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗ ಕ್ಷೇಮವನ್ನು ಸುಧಾರಿಸಲು ಸಹಾಯ, ಚಿಂತನೆ, ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೇಯೆ ಪ್ರಕೃತಿ ಮತ್ತು ಮನುಷ್ಯನ ನಡೆವೆ ಸಾಮರಸ್ಯ ಮೂಡಿಸುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಈ ವೇಳೆ ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶ ಎನ್.ಶ್ರೀಪಾದ್, 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವಿಜಯಾನಂದ, 2ನೇ ಹೆಚ್ಚುವರಿ ನ್ಯಾಯಾಧೀಶ ಪ್ರವೀಣ್‍ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶ ಶಿವಪ್ಪ ಸಲಗೆರೆ, 2ನೇ ಹೆಚ್ಚುವರಿ ನ್ಯಾಯಾಧೀಶೆ ರೇಷ್ಮಾ, 3ನೇ ಹೆಚ್ಚುವರಿ ನ್ಯಾಯಾಧೀಶರಾದ ಅಪ್ತಾಬ್, ಸಿವಿಲ್ ನ್ಯಾಯಾಧೀಶ ಪ್ರಶಾಂತ್, ಮಲ್ಲಿಕಾರ್ಜುನ್, ಸಿದ್ದರಾಜು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ, ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ,
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜು ಗೋಪನಾಳು, ಕಾರ್ಯದರ್ಶಿ ಎಸ್.ಬಸವರಾಜು, ಸಹಕಾರ್ಯದರ್ಶಿ ಎ.ಎಸ್. ಮಂಜುನಾಥ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಯೋಗ ಮತ್ತು ಚಿಕಿತ್ಸೆ ಹಿರಿಯ ವೈದ್ಯಾದಿಕಾರಿ ಡಾ.ಮಂದಾಕಿನಿ, ಯೋಗ ತರಬೇತುದಾರ ಮಂಜುನಾಥ್, ಗೀತಾ ಮಂಜುನಾಥ್, ಸಿಇಓ ಬಿ.ಶ್ರೀನಿವಾಸ್, ಕಾರ್ಯಕಾರಿ ಸಮಿತಿ ಸದಸ್ಯರಾದ ಭಾಗ್ಯಲಕ್ಷ್ಮೀ, ಅಜಯ್ ಆವರಗೆರೆ, ಸಂತೋಷ್‍ಕುಮಾರ್, ಚೌಡಪ್ಪ, ನಾಗರಾಜ್, ನೀಲಕಂಠಯ್ಯ ಇತರರು ಇದ್ದರು.