ಮನಸ್ಸಿನ ಮೇಲೆ ಪರಿಣಾಮ ವಾದರೆ ಮನುಷ್ಯ ಪರಿವರ್ತನೆಯಾಗುವನು:ಪೂಜ್ಯ ಶ್ರೀ ಗುರು ಮಹಾಂತ ಮಹಾ ಸ್ವಾಮಿಗಳು ಇಳಕಲ್

ಭಾಲ್ಕಿ:ಡಿ.4:ಇವತ್ತು ನಮ್ಮ ಭಾರತ ಉಳಿದರೆ ನಮ್ಮ ದೇಶ ಉಳಿದರೆ ನಮ್ಮ ಧರ್ಮ ಉಳಿಯುತ್ತದೆ. ನಮ್ಮ ಸಂಸ್ಕøತಿ ಪರಂಪರೆ ಉಳಿಯುತ್ತದೆ. ಭಾರತ ಅದರ ಪರಂಪರೆ ಸಂಸ್ಕೃತಿ ಅದ್ಭುತವಾದದ್ದು. ನಮ್ಮ ಶರಣರು ಹೇಳಿದ ಹಾಗೆ ಇಡೀ ಜಗತ್ತಿಗೆ ಅಂತಃಸತ್ವದ ವಿದ್ಯೆಯನ್ನು ಹೇಳಿಕೊಟ್ಟಿದ್ದು ಭಾರತ. ಮನುಷ್ಯ ಏನು ಇಲ್ಲದೆ ಆನಂದವಾಗಿರುವಂತಹ ಅಂತಃಸತ್ವದ ವಿದ್ಯೆಯನ್ನು ಇಡೀ ಜಗತ್ತಿಗೆ ಕೊಟ್ಟಿದ್ದು ಭಾರತ.
ಮನುಷ್ಯನಿಗೆ ಒಂದು ಹಪ-ಹಪೆ ಇರುತ್ತದೆ ನನ್ನಲ್ಲಿ ದುಡ್ಡಿಲ್ಲ, ಬಟ್ಟೆ ಇಲ್ಲ, ಉದ್ಯೋಗವಿಲ್ಲ, ನನಗೆ ಆಹಾರವಿಲ್ಲ ಈ ಹಪಹಪೆಯಲ್ಲಿ ಮನುಷ್ಯ ರಾಕ್ಷಸನಾಗುತ್ತಾನೆ. ಎಲ್ಲರಲ್ಲೂ ಹಣ ಇರುವುದಿಲ್ಲ, ಎಲ್ಲರಲ್ಲೂ ಕಾರು ಇರುವುದಿಲ್ಲ, ಬಂಗಾರ ಇರುವುದಿಲ್ಲ, ಮಹಡಿ ಮನೆ ಇರುವುದಿಲ್ಲ, ಇದನ್ನೆಲ್ಲಾ ಹಪಹಪಿಸುವ ಮನುಷ್ಯ ಉಳ್ಳವರನ್ನು ಕೊಂದು ಎಲ್ಲವನ್ನೂ ತನಗಾಗಿ ಮಾಡಿಕೊಳ್ಳುತ್ತಾನೆ. ಇದು ರಾಕ್ಷಸ ಪ್ರವೃತ್ತಿ ಇದು ಜಗತ್ತಿನ ಎಲ್ಲಾ ಕಡೆ ನಡೆದಿದೆ.
ಅಮೇರಿಕಾದ ಒಂದು ದೇಶದಲ್ಲಿ ಒಂದು ಘಟನೆ ಕೇಳಿದೆ ಸುಮಾರು 100 ಡಾಲರ್ ಕೊಟ್ಟು ಯುವಕ ಒಂದು ಬೂಟನ್ನು ತೆಗೆದುಕೊಂಡಿದ್ದ ಅದನ್ನು ನೋಡಿದ ಒಬ್ಬ ಬಡ ಹುಡುಗ ಅದು ನನಗೆ ಬೇಕಲ್ಲಾ ಬೇಕು ಎಂದು ಯುವಕನನ್ನು ಕೊಂದು ಬೂಟನ್ನು ಕಸಿದುಕೊಂಡ. ಇದು ರಾಕ್ಷಸ ಪ್ರವೃತ್ತಿ.
ಅದಕ್ಕಾಗಿ ಈ ಎಲ್ಲಾ ದಾಹ ಗಳನ್ನು ಮೀರಿ ಮನುಷ್ಯ ಏನಿಲ್ಲದಿದ್ದರೂ ಕೂಡ ತಾನು ಸಂತರಂತೆ ಬದುಕುವ ಅದ್ಭುತವಾದ ಅಂತಃಸತ್ವದ ವಿದ್ಯೆಯನ್ನು ಕೊಟ್ಟದ್ದು ಭಾರತ.
ಅದಕ್ಕೆ ಮ್ಯಾಕ್ಸ್ ಮುಲ್ಲರ್ ಹೇಳುತ್ತಾರೆ,
” ನಿನ್ನ ಗುರು ಯಾರೆಂದರೆ ಭಾರತದಲ್ಲಿನ ಉಪನಿಷತ್ತುಗಳು ನಾನು ಮಲಗುವಾಗ ನನ್ನ ತಲೆಯ ಪಕ್ಕದಲ್ಲಿ ಉಪನಿಷತ್ತುಗಳನ್ನು ಇಟ್ಟುಕೊಂಡು ಮಲಗುತ್ತೇನೆ. ಏಕೆಂದರೆ ಅದರಲ್ಲಿ ಮನುಷ್ಯರನ್ನು ದೇವರನ್ನಾಗಿ ಮಾಡುವಂತಹ ಶಕ್ತಿ ಇದೆ. ಮನುಷ್ಯನ ರಾಕ್ಷಸ ಗುಣಗಳನ್ನು ಕಳೆದು ಅವನಲ್ಲಿ ಸಾತ್ವಿಕ ಸದ್ಗುಣಗಳನ್ನು ತುಂಬುವಂತಹ ಅವನ ಮನಸ್ಸನ್ನು ದೇವರಾಗಿ ಪರಿವರ್ತಿಸುವ ಅದ್ಭುತವಾದ ಶಕ್ತಿ ಆ ಸಾಹಿತ್ಯದಲ್ಲಿದೆ”.
ಮನುಷ್ಯನಿಗೆ ದಾಹ ಇರುತ್ತದೆ ಅದಕ್ಕಾಗಿ ಮನುಷ್ಯ ರಾಕ್ಷಸನಾಗುತ್ತಾನೆ ಮನುಷ್ಯ ರಾಕ್ಷಸನಾಗುವುದು ಮನಸ್ಸಿನಿಂದಲೇ ಮನುಷ್ಯ ಮಹಾತ್ಮನಾಗುವುದು ಮನಸ್ಸಿನಿಂದಲೇ. ಮನುಷ್ಯನ ಮನಸ್ಸು ಎಲ್ಲಾ ಪಾತ್ರವನ್ನು ಕೂಡ ನಿರ್ವಹಿಸುತ್ತದೆ. ಇತ್ತಕಡೆ ನಮ್ಮನ್ನು ಮಹಾತ್ಮರನ್ನಾಗಿ ಮಾಡುವ ಶಕ್ತಿಯೂ ಇದೆ ರಾಕ್ಷಸರನ್ನಾಗಿ ಮಾಡುವ ಶಕ್ತಿಯೂ ಮನಸ್ಸಿಗಿದೆ. ಅದಕ್ಕಾಗಿ ನಮ್ಮ ಮನಸ್ಸು ಬಹಳ ಮುಖ್ಯ ನಾವೇನಾದರೂ ಬುದ್ಧಿ ಹೇಳುವುದಾದರೆ, ತತ್ವ ಹೇಳುವುದಾದರೆ, ಸಿದ್ಧಾಂತ ಹೇಳುವುದಾದರೆ ಅದು ಮನಸ್ಸಿಗೆ ಹೇಳಬೇಕು. ಪರಿವರ್ತನೆಯಾಗುವುದು ಆದರೆ ಮನಸೇ ಪರಿವರ್ತನೆಯಾಗಬೇಕು.
ಅಲ್ಲಮಪ್ರಭುಗಳು ಒಂದು ಮಾತನ್ನು ಹೇಳಿದ್ದರು, “ಪರಿಣಾಮದೊಳಗೆ ಮನದ ಪರಿಣಾಮವೇ ಚೆಲುವು ಗುಹೇಶ್ವರ”
ಏನಾದರೂ ನಮಗೆ ಸೌಂದರ್ಯಬೇಕು ಎಂದರೆ ಅದು ಮನಸ್ಸಿನ ಚೆಲುವು ಸೌಂದರ್ಯ, ಏನಾದರೂ ಪರಿಣಾಮವಾಗಬೇಕಾದರೆ ಅದು ಮನಸ್ಸಿನ ಮೇಲೆ ಪರಿಣಾಮವಾಗಬೇಕು. ಮನಸ್ಸಿನ ಮೇಲೆ ಪರಿಣಾಮವಾದರೆ ಪರಿವರ್ತನೆಯಾಗುವುದು. ಅದಕ್ಕಾಗಿ ಮನುಷ್ಯನ ಮನಸ್ಸು ಯಾವಾಗಲೂ ಮಂಗ ಸ್ವರೂಪವಾಗಿ ಇರುತ್ತದೆ.
ದ್ವೇಷ ಅಸೂಯೆ ಮತ್ಸರ ಹೊಟ್ಟೆಕಿಚ್ಚು ಅಹಂಕಾರದಿಂದ ತುಂಬಿರುವಂತಹ ಮನಸ್ಸು ರಾಕ್ಷಸ ಪ್ರವೃತ್ತಿಯ ಮನಸ್ಸು .
ಇನ್ನೊಬ್ಬರು ಚೆನ್ನಾಗಿರುವುದನ್ನು ನೋಡುವುದಿಲ್ಲ,
ಇನ್ನೊಬ್ಬರು ಆನಂದವಾಗಿರುವುದು ಸಹಿಸುವುದಿಲ್ಲ, ಇನ್ನೊಬ್ಬರು ಹೊಟ್ಟೆ ತುಂಬಾ ಊಟ ಮಾಡಿದರು ಸಹಿಸುವುದಿಲ್ಲ, ಒಂದು ಚೆಂದದ ಬಟ್ಟೆ ತೆಗೆದುಕೊಂಡರು ಸಹಿಸುವುದಿಲ್ಲ. ಇವನಲ್ಲಿ ಎಲ್ಲವೂ ಇದ್ದು ಬಟ್ಟೆ, ಕಾರು, ಬಂಗಾರ, ಊಟ ಎಲ್ಲವೂ ಇದ್ದು ಇನ್ನೊಬ್ಬರು ಅವುಗಳನ್ನೂ ಪಡೆಯಬಾರದು ಎನ್ನುವಂತಹ ಅಸೂಯೆ ಮನೋಭಾವದ ಮನಸ್ಸು. ಈ ಮನಸ್ಸಿಗೆ ಏನು ತುಂಬಿದರೂ ಕೂಡ ಆನಂದವಾಗಿರುವುದಿಲ್ಲ. ಈ ಮನಸ್ಸಿಗೆ ಜ್ಞಾನವನ್ನೇ ತುಂಬಬೇಕು, ಈ ಮನಸ್ಸಿಗೆ ತಿಳುವಳಿಕೆಯನ್ನು ತುಂಬಬೇಕು, ಈ ಮನಸ್ಸಿಗೆ ಅರಿವನ್ನೇ ತುಂಬಬೇಕು. ಈ ಮನಸ್ಸಿಗೆ ಅರಿವನ್ನು ತುಂಬುವ ಶಕ್ತಿ ಭಾರತದ ಅಧ್ಯಾತ್ಮದಲ್ಲಿದೆ. ಅದು ವಿದೇಶದ ಯಾವುದೇ ದೇಶದಲ್ಲಿ ಅಂತಹ ಶಕ್ತಿ ಇಲ್ಲ.
ಅದಕ್ಕಾಗಿಯೇ ಈ ಮಂಗದಂತಹ ಮನಸ್ಸನ್ನು ಲಿಂಗದಂತೆ ಮಾಡುವ ಶಕ್ತಿ ಅದು ಈ ಭಾರತದ ಆಧ್ಯಾತ್ಮಿಕ ಶಕ್ತಿ. ಅದಕ್ಕಾಗಿ ಬಸವಣ್ಣನವರು ಸಹಜವಾಗಿ ಈ ಮನಸ್ಸು ನಿರಾಕಾರವಾಗಿದೆ ಅದ್ಭುತವಾದ ಉಪಟಳವನ್ನು ಮಾಡುತ್ತದೆ, ಅದಕ್ಕಾಗಿ ಮನಸ್ಸಿಗೆ ಮಹಾನ್ ಶಕ್ತಿಯನ್ನು ತುಂಬುವಂತಹ, ಅರಿವನ್ನು ತುಂಬುವಂತಹ ಕಾಯಕವನ್ನು ಮಾಡಿದವರು ಬಸವಣ್ಣನವರು.
ಬಸವಣ್ಣನವರು ಏನು ಮಾಡಿದರೆಂದರೆ, ನೇರವಾಗಿ ಮನಸ್ಸಿಗೆ ಸಂಸ್ಕಾರ ನೀಡಿದರು ಮನಸ್ಸನ್ನು ಲಿಂಗ ಸ್ವರೂಪವಾಗಿ ಮಾಡಬೇಕು ಎನ್ನುವುದಕ್ಕಾಗಿಯೇ ಬಸವಣ್ಣನವರು ಲಿಂಗವನ್ನು ನೀಡಿದರು.
ನಮ್ಮ ಹಿರಿಯ ಅಜ್ಜನವರು ಹೇಳುತ್ತಿದ್ದರು, ಲಿಂಗಪೂಜಾ ಯಾಕೆ ಮಾಡಬೇಕು ಅಂದ್ರೆ ಮನಸ್ಸು ಲಿಂಗವಾಗಬೇಕು, ಮನಸ್ಸು ಲಿಂಗವಾಗಬೇಕಾದರೆ ದೈವೀಗುಣಗಳಿಂದ ತುಂಬಿರಬೇಕು. ಆಸೆ, ಆಮಿಷ, ತಾಮಸ, ಹುಸಿ, ವಿಷ, ಕುಹುಕ, ಕುಟಿಲ, ಕ್ರೋಧ, ಮಿಥ್ಯ ಇವುಗಳನ್ನು ನಾಲಿಗೆಯ ಮೇಲಿಂದ ನೀನು ತೆಗೆದು ಕಳೆಯಯ್ಯ.
10 ವಿಷಗಳಿವೆ ನಮ್ಮ ಮನಸ್ಸಿನಲ್ಲಿ ಒಂದು ವಿಷವಿರುವ ಸರ್ಪ ಕಡಿದರೆ ಮನುಷ್ಯ ಸಾಯುತ್ತಾನೆ, ಅದೇ 10 ವಿಷ ಇರುವ ಮನುಷ್ಯನ ಮನಸ್ಸು ನಮ್ಮ ಜೊತೆಯಲ್ಲಿ ಇರುತ್ತದೆ ಎಂದರೆ ನಾವು ಎಷ್ಟು ವಿಷಪೂರಿತವಾಗಿರಬೇಕು. ಇದರ ಜೊತೆ ಬದುಕಬೇಕು. ಮದುವೆ ಮಾಡಿಕೊಂಡರೆ ಹೆಂಡತಿಯಿಂದ ದೂರ ಆಗಬಹುದು ಆದರೆ ಈ ಮನಸ್ಸಿನಿಂದ ಬೇರೆ ಆಗಲಾರದು. ಪ್ರಾಣ ಹೋಗುವರೆಗೂ ನಮ್ಮ ಜೊತೆಯಲ್ಲಿ ಇರುತ್ತದೆ. ಈ ಮನಸ್ಸು ನಮ್ಮನ್ನು ಕಾಡುತ್ತಲೇ ಇರುತ್ತದೆ ನಮ್ಮನ್ನು ನಾಶಮಾಡುತ್ತದೆ. ನಮ್ಮ ವ್ಯಕ್ತಿತ್ವವನ್ನು ಹರಣ ಮಾಡುತ್ತದೆ. ಅದಕ್ಕಾಗಿ ನಮ್ಮ ವ್ಯಕ್ತಿತ್ವ ವಿಕಸನವಾಗಬೇಕಾದರೆ
ಮನಸ್ಸು ಸದ್ಭಾವದಿಂದ ಕೂಡಿರಬೇಕು. ಲಿಂಗ ಸ್ವರೂಪದ ಗುಣಗಳನ್ನು ಹೊಂದಿರಬೇಕು, ಆಗ ಮಾತ್ರ ನಮ್ಮ ಮನಸ್ಸು ಅದು ಸದ್ಭಾವಿ ಮನಸ್ಸಾಗುವುದು ಆವಾಗ ಮಾತ್ರ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಅದಕ್ಕಾಗಿ ಮನಸ್ಸನ್ನು ಸದ್ಭಾವಿಕರಣ ಮಾಡಲಿಕ್ಕೆ ಈ ಮನಸ್ಸನ್ನು ಲಿಂಗ ಸ್ವರೂಪಿಯಾಗಿ ಮಾಡಲಿಕ್ಕೆ ಬಸವಣ್ಣನವರು ಲಿಂಗ ಕೊಟ್ಟರು. ಅದಕ್ಕಾಗಿ ನಾವು ಇಷ್ಟಲಿಂಗವನ್ನು ಕೊರಳಲ್ಲಿ ಕಟ್ಟಿಕೊಂಡು ನಿತ್ಯದಲ್ಲಿ ಶಿವಯೋಗವನ್ನು ದೃಷ್ಟಿ ಯೋಗವನ್ನು ಮಾಡಬೇಕು. ದೃಷ್ಟಿ ಯೋಗ ಮಾಡಿದರೆ ನಮ್ಮ ಮನಸ್ಸಿನಲ್ಲಿರುವ ಟ್ರಬಲ್ ತಿಂಗ್ಸ್ ಎಂದರೆ ದ್ವೇಷ ಅಸೂಯೆ ಹೊಟ್ಟೆಕಿಚ್ಚು ಎಲ್ಲವೂ ಕೆಂಡದ ಮೇಲೆ ಒಣಹುಲ್ಲು ಹಾಕಿದಂತೆ ಸುಟ್ಟು ಹೋಗುತ್ತವೆ.
ಮನಸ್ಸು ಉಲ್ಲಾಸಭರಿತವಾಗುತ್ತದೆ ಎಲ್ಲ ಕೆಟ್ಟ ಗುಣಗಳನ್ನು ಅಳಿಸಿಹಾಕಿಬಿಡುತ್ತದೆ. ಮನಸ್ಸು ಮಗುವಿನಂತ ಮನಸ್ಸಾಗುವುದು ದ್ವೇಷ ವಿಲ್ಲದ ಮನಸ್ಸಾಗುವುದು, ಬರೀ ಪ್ರೀತಿಯನ್ನು ಸೂಸುವ ಮನಸ್ಸಾಗುವುದು. ಅದಕ್ಕಾಗಿ ಲಿಂಗದ ಮಹಿಮೆ ಅದ್ಭುತವಾದದ್ದು. ಅಂತಹ ಇಷ್ಟಲಿಂಗ ಹುಟ್ಟಿದ್ದು ಮನುಷ್ಯನ ಮನಸ್ಸನ್ನು ದೇವ ಮನಸ್ಸನ್ನಾಗಿ, ದೇವಸ್ವರೂಪವನ್ನಾಗಿ ಸೃಷ್ಟಿಮಾಡಲು ಲಿಂಗ ಅದು ಹುಟ್ಟಿದ್ದು ಈ ಭಾರತದಲ್ಲಿ.
ಮನಸ್ಸನ್ನು ಕೇಂದ್ರೀಕರಿಸುವ ಅತ್ಯಂತ ಸುಲಭವಾದ ಮಾರ್ಗ ಲಿಂಗದಲ್ಲಿ ದೃಷ್ಟಿಯೋಗ ಇದನ್ನು ನಮಗೆ 12ನೇ ಶತಮಾನದಲ್ಲಿ ಬಸವಣ್ಣನವರು.
12ನೆಯ ಶತಮಾನದ ಪೂರ್ವದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಮೂರನೇ ಕಣ್ಣಿನ ಭಾಗದಲ್ಲಿ (ಎರಡು ಕಣ್ಣಿನ ಮಧ್ಯಭಾಗದಲ್ಲಿ) ಕೇಂದ್ರೀಕರಿಸಬೇಕಾಗಿತ್ತು. ಅದು ಸಾಮಾನ್ಯರಿಗೆ
ಕಷ್ಟದಾಯಕವಾದುದರಿಂದ ಬಸವಣ್ಣನವರು ಅತ್ಯಂತ ಸುಲಭದ ವೇಗವಾದ ವಿಧಾನವನ್ನು ನೀಡಿದರು. ಪಂಡಿತರು ಪಾಮರರು ಕೂಲಿಕಾರರು ಎಲ್ಲರೂ ಇದನ್ನು ಸಾಧಿಸಬೇಕು, ಎಲ್ಲರೂ ಶರಣ ರಾಗಬೇಕು ತಮ್ಮ ಕಾಯಕವನ್ನು ಮಾಡುತ್ತಲೇ ಉನ್ನತವಾದ ಸ್ಥಾನಕ್ಕೆ ಏರಬೇಕು ಎನ್ನುವ ಕಾರಣಕ್ಕಾಗಿ ಇಷ್ಟಲಿಂಗವನ್ನು ನೀಡಿದರು. ಸೂಳೆಸಂಕವ್ವ ಕಸ ಗುಡಿಸುವ ಸತ್ಯಕ್ಕ ನಂತವರನ್ನು ಮಹಾನ ಧಾರ್ಮಿಕ ಜೀವಿಗಳನ್ನು ಆಗಿ ಮಾಡಿದ್ದು ಪವಿತ್ರ ಭೂಮಿ ಭಾರತ. ಆ ಪರಿವರ್ತನೆಗೆ ಯಾವುದೇ ದೇಶದಲ್ಲಿ ಔಷಧಿ ಇರಲಿಲ್ಲ ಅಂತಹ ಪರಿವರ್ತನೆ ಅವಕಾಶ ನೀಡಿದ್ದು ಈ ನಮ್ಮ ಭಾರತ.
ಸಂಗ್ರಹ: ಸಿದ್ದಲಿಂಗ ಶಿವಯೋಗಿ ಮಠಪತಿ ಉಚ್ಚ ತಾ ಭಾಲ್ಕಿ ಜಿ. ಬೀದರ