ಮನಸ್ಸಿನ ಪ್ರಶಾಂತತೆಗೆ ಯೋಗ ಸಹಕಾರಿ

ಕೋಲಾರ, ಮಾ,೨೭-ಯೋಗವು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನಸ್ಸಿನ ಪ್ರಶಾಂತತೆಗೆ ಯೋಗ ಸಹಕಾರಿಯಾಗಿದೆ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ರವರು ಅಭಿಪ್ರಾಯಪಟ್ಟರು.
ಚಿಂತಾಮಣಿ ನಗರದ ಬೆಂಗಳೂರು ರಸ್ತೆಯಲ್ಲಿರುವ ಶ್ರೀಸಮೀರಭವನದಲ್ಲಿ ಶ್ರೀರಾಮಚಂದ್ರ ಮಿಷನ್ ರವರು ಆಯೋಜಿಸಿದ್ದ ಯೋಗಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗವು ವ್ಯಾಯಾಮ ಮತ್ತು ಧ್ಯಾನದ ಒಂದು ವಿಶಿಷ್ಟವಾದ ರೂಪವಾಗಿದ್ದು ಅದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತಾ, ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಮಾನವನು ಆಧುನಿಕ ಶೈಲಿಯ ಜೀವನ ಪದ್ದತಿಗೆ ಒಗ್ಗಿಕೊಳ್ಳುತ್ತಿರುವುದರಿಂದ ಮಾನಸಿಕ ಒತ್ತಡ, ಖಿನ್ನತೆಯಂತಹ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸರಳ ಜೀವನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ರತಿದಿನ ಎಷ್ಟೋ ಕೆಲಸದ ಒತ್ತಡವಿದ್ದರೂ ಯೋಗ, ವ್ಯಾಯಾಮ, ಧ್ಯಾನಕ್ಕೆ ಸಮಯವನ್ನು ಮೀಸಲಿಡಬೇಕು ಎಂದರು.
ಯಾವುದೇ ಕೆಲಸವನ್ನು ಹೆಚ್ಚು ಕ್ರಿಯಾಶೀಲವಾಗಿ ಮತ್ತು ಸೃಜನಾತ್ಮಕವಾಗಿ ಮಾಡಲು ಮಾನಸಿಕವಾದ ಸಿದ್ಧತೆ ಬಹಳ ಮುಖ್ಯವಾದುದು. ನಮ್ಮ ಕರ್ತವ್ಯದಲ್ಲಿ ನೈಪುಣ್ಯತೆಯನ್ನು ಹಾಗೂ ಏಕಾಗ್ರತೆಯನ್ನು ವೃದ್ಧಿ ಮಾಡಲು ಯೋಗವು ಸಹಕಾರಿಯಾಗಿದೆ. ಶರೀರವು ಒಂದು ಯಂತ್ರವಿದ್ದಂತೆ. ಯಂತ್ರಗಳಂತೆ ಶರೀರವು ಕೂಡ ದಿನಕಳೆದಂತೆ ಸವೆಯುತ್ತದೆ. ಈ ಸವೆತವನ್ನು ತಡೆಗಟ್ಟುವಲ್ಲಿ ವ್ಯಾಯಾಮ, ಯೋಗ, ಪ್ರಾಣಯಾಮ ಸಹಕರಿಸುತ್ತದೆ. ಪ್ರತಿನಿತ್ಯದ ಆಹಾರ ಸೇವನೆಯು ಸಹ ವೈದ್ಯವಿಜ್ಞಾನದ ಒಂದು ಶಿಸ್ತು. ಸಮತೋಲನ ಆಹಾರ ಸೇವನೆಯಿಂದ ಹಲವಾರು ಖಾಯಿಲೆಗಳನ್ನು ದೂರವಿಡಬಹುದಾಗಿದೆ. ಆರೋಗ್ಯವಂತ ಪ್ರಜೆ ದೇಶದ ಸಂಪತ್ತು ಎಂದರು.