ಮನಸ್ಸಿಗೆ ಮುದ ನೀಡುವ ವಾಯುಮಂಡಲದ ಅವಶ್ಯಕತೆ ಇದೆ: ಯಾತನೂರ್

ಕಲಬುರಗಿ: ಜ.3: ಇಂದಿನ ಗಡಿಬಿಡಿ, ಗಲಿಬಿಲಿಯ ಜೀವನದಲ್ಲಿ, ಎಲ್ಲಡೆ ಮಾನಸಿಕ ಸೆಳೆತದ ಸಮಯದಲ್ಲಿ, ಕೋವಿಡ್2 ದ ಆತಂಕದಲ್ಲಿ ಇಂತಹ ಆಧ್ಯಾತ್ಮಿಕ ಪರಿಸರ ಹಾಗೂ ಮನಸ್ಸಿಗೆ ಮುದ ನೀಡುವ ವಾಯುಮಂಡಲದ ಆವಶ್ಯಕತೆ ಇದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಪ್ರೊ. ಚಂದ್ರಕಾಂತ್ ಯಾತನೂರ್ ಅವರು ಹೇಳಿದರು.
ಹೊಸದು ಎಲ್ಲರಿಗೂ ಪ್ರಿಯ, ಆದ್ದರಿಂದ ಹೊಸ ವರುಷದ ನಿಮಿತ್ಯ ನಗರದ ಹೊರ ವಲಯದಲ್ಲಿ ಸೇಡಂ ರಸ್ತೆಯಲ್ಲಿರುವ ಬ್ರಹ್ಮಾಕುಮಾರಿಸ್ ಅಮೃತಸರೋವರ ರಿಟ್ರೀಟ್ ಸೆಂಟರಿನಪರಿಸರದಲ್ಲಿ ಜಾನಕಿ ಜಲಧಾರೆಯ ಜೊತೆಗೆ ನೂತನವಾಗಿ ಈಗ ನಯನ ಮನೋಹರ ಕಣ್ಮನ ಸೆಳೆಯುವ ವಿಧದಿಂದ ಹೊಸ ಲೇಜರ್ ಶೋ, ಲೈಟ್ ಅಂಡ್ ಸೌಂಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅದರಲ್ಲೂ ಯುವಕರಿಗೆ ಇದು ಬಹಳ ಆವಶ್ಯಕ ಎನಿಸುತ್ತದೆ ಎಂದರು.
ಅತಿಥಿಗಳಾಗಿ ಅಗಮಿಸಿದ್ದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಟೆಂಗಳಿ ಅವರು ಮಾತನಾಡಿ, ಇಂದು ಮಹಿಳೆ ಅನುಭವಿಸುತ್ತಿರುವ ಯಾತನೆಯನ್ನು ಹೋಗಲಾಡಿಸಲು ರಾಜಯೋಗದ ಶಕ್ತಿ ಅತಿ ಆವಶ್ಯಕವಾಗಿದೆ ಎಂದರು.
ಉಪವಲಯ ಮುಖ್ಯಸ್ಥೆ ರಾಜಯೋಗಿನಿ ಬಿಕೆ ವಿಜಯಾ ದೀದಿಯವರು ಲೈಟ್ ಆಂಡ್ ಸೌಂಡ್ ಕಾರ್ಯಕ್ರಮದ ಕುರಿತು ಮಾತನಾಡಿ, ಜನರಿಗೆ ಖಂಡಿತವಾಗಿ ಒಂದು ಹೊಸ ಅನುಭವ ಮಾಡಿಸುತ್ತದೆ ಎಂದರು. ವೇದಿಕೆಯ ಮೇಲೆ ಅಮೃತಸರೋವರದ ಸಂಚಾಲಿಕೆ ಬಿ.ಕೆ. ಶಿವಲೀಲಾ ಅಕ್ಕ, ಆದರ್ಶ ನಗರ ಸೇವಾ ಕೇಂಧ್ರದ ಮುಖ್ಯಸ್ಥೆ ಬಿ.ಕೆ. ದಾನೇಶ್ವರಿ ಅಕ್ಕ, ಶಿಕ್ಷಣ ವಿಭಾಗದ ಸಂಯೋಜಿಕೆ ಬಿ.ಕೆ. ಸವಿತಾ, ಸಮಾಜ ಸೇವಾ ಪ್ರಭಾಗದ ರಾಷ್ಟ್ರೀಯ ಸಂಯೋಜಕ ರಾಜಯೋಗಿ ಬಿ.ಕೆ. ಪ್ರೇಮಣ್ಣ ಹಾಗೂ ಚಿರಾಯು ಆಸ್ಪತ್ರೆಯ ಅಧ್ಯಕ್ಷ ಡಾ. ಮಂಜುನಾಥ್ ದೋಶೆಟ್ಟಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕುಮಾರಿ ತನುಶ್ರೀ ಹಾಗೂ ಕುಮಾರಿ ಅಂಬಿಕಾರವರು ನೃತ್ಯದ ಮೂಲಕ ಸ್ವಾಗತಿಸಿದರು. ಈ ಜಾನಕಿ ಜಲಧಾರೆ, ಲಾಯಿಟ್ ಎಂಡ ಸಾವುಂಡ ಹಾಗೂ ಲೇಜರ್ ಶೋ ಕಾರ್ಯಕ್ರಮ ಪ್ರತಿದಿನ ಸಂಜೆ 6ರಿಂದ 7 ಗಂಟೆಯ ವರೆಗೆ ಏರ್ಪಡಿಸಲಾಗುತ್ತದೆ. ಸಾರ್ವಜನಿಕರು ಇದರ ಲಾಭ ಪಡೆಯಬೇಕೆಂದು ಆಯೋಜಕರು ವಿನಂತಿಸಿದ್ದಾರೆ.