ಮನಸ್ಸನ್ನು ಹತೋಟಿಯಲ್ಲಿಡಲು ಯೋಗ ಅತಿ ಮುಖ್ಯ


ಸಂಜೆವಾಣಿ ವಾರ್ತೆ
ಸಂಡೂರು :ಜು: 23  ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡಬೇಕಾಗಿದೆ. ಧ್ಯಾನ ಮತ್ತು ಯೋಗದಿಂದ ಹಲವಾರು ಸಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು, ಮನಸ್ಸನ್ನು ಹತೋಟಿಯಲ್ಲಿಡಲು ನಿತ್ಯ ಉಲ್ಲಾಸವಾಗಿರಲು ಧ್ಯಾನ ಅತಿ ಮುಖ್ಯ ಎಂದು ಶಶಿಧರ ಗುರೂಜಿ ತಿಳಿಸಿದರು.
ಅವರು ಪಟ್ಟಣದ ಬಿ.ಕೆ.ಜಿ. ಗ್ಲೋಬಲ್ ಶಾಲೆಯ ವಿದ್ಯಾರ್ಥಿಗಳು, ಹಾಗೂ ಬಿಕೆಜಿ ಕಂಪನಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಯೋಗ ಮತ್ತು ಧ್ಯಾನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ, 184 ದೇಶಗಳು ಯೋಗ ದಿನಾಚರಣೆಯಲ್ಲಿ ಭಾಗವಹಿಸಿರುವುದು ಹೆಮ್ಮೆಯಾಗಿದೆ, ಕಾರಣ ಜಗತ್ತಿಗೆ ಯೋಗ ನೀಡಿದ ಕೊಡುಗೆ ಭಾರತದ್ದಾಗಿದೆ ಎಂದರು.
ಕಂಪನಿಯ ಮುಖ್ಯಸ್ಥ ಬಿ.ನಾಗನಗೌಡ ಮಾತನಾಡಿ ಏಕಾಗ್ರತೆಯನ್ನು ಕಳೆದುಕೊಂಡಿದ್ದೇವೆ, ಶಾಂತಿ ಇಲ್ಲವಾಗುತ್ತಿದೆ, ಬರೀ ಮೋಬೈಲ್ ದಾಸರಾಗುತ್ತಿದ್ದೇವೆ, ಅದ್ದರಿಂದ ಯೋಗ ಮಾಡುವ ಮೂಲಕ ಶಾಂತಿಯನ್ನು ಪಡೆದುಕೊಳ್ಳಬಹುದು, ಅದು ಭಾಷೆ, ದೇಶ, ಧರ್ಮವನ್ನು ಮೀರಿ ಇರುವಂತಹದ್ದು ಯೋಗವಾಗಿದೆ ಎಂದರು, ಮನುಷ್ಯ ಜೀವಿ ಉಳಿದ ಜೀವಿಯಂತೆ ಬುದ್ದಿವಂತನಾದರೂ ಸಹ ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ, ಅದರೆ ಪ್ರಾಣಿ, ಪಕ್ಷಿಗಳು ಪ್ರಕೃತಿಯ ನಿಯಮ ಪಾಲಿಸುತ್ತಿವೆ ಅದ್ದರಿಂದ ನಾವು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಕೆಜಿ ಕಂಪನಿಯ ಸಿಬ್ಬಂದಿ ವರ್ಗದವರೂ ಉಪಸ್ಥಿತರಿದ್ದರು.