ಮನಸ್ಸನ್ನು ಗೆದ್ದವರು ಮಹಾತ್ಮರು-ಡಾ.ಜಯರಾಮ್

ಕೋಲಾರ,ಜು,೪-ಮನಸ್ಸನ್ನು ಗುರುಬೋಧನೆಯ ಮೂಲಕ ತತ್ವಚಿಂತನೆಯಲ್ಲಿ ತೊಡಗಿಸಿಕೊಳ್ಳಬೇಕು. ಹೀಗೆ ಮಾಡುತ್ತಾ ಅಜ್ಞಾನವನ್ನು ದೂರ ಮಾಡಿಕೊಂಡು ಮನಸ್ಸನ್ನು ಗೆದ್ದವರು ಮಹಾತ್ಮರಾಗುತ್ತಾರೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.
ಕೈವಾರದ ಶ್ರೀ ಯೋಗಿ ನಾರೇಯಣ ಮಠದಲ್ಲಿ ನಡೆದ ಗುರುಪೂರ್ಣಮಿ ಪ್ರಯುಕ್ತ ನಡೆದ ಗುರುಪೂಜಾ ಸಮಾರಂಭದಲ್ಲಿ ಗುರುಸಂದೇಶವನ್ನು ನೀಡುತ್ತಾ ಅವರು ಮಾತನಾಡಿ ಧನಕನಕವೇ ಮೊದಲಾದ ತನ್ನ ಭೌತಿಕ ಸಂಪತ್ತುಗಳು ತನ್ನನ್ನು ಎಲ್ಲ ವಿಪತ್ತುಗಳಿಂದ ಪಾರು ಮಾಡುವ ಸಾಧನಗಳಾಗಿ ಎಂದೆಂದಿಗೂ ತನ್ನೊಡನೆ ಇರುತ್ತವೆ ಎಂಬ ಕಲ್ಪನೆಯೇ ಮಮತೆ. ಮಾನವರು ಮೋಹ-ಮಮತೆಗಳನ್ನು ಬಿಡುವುದಿಲ್ಲ. ನಮ್ಮನ್ನು ಮುಕ್ತಿಯ ಕಡೆ ತೆಗೆದುಕೊಂಡು ಹೋಗುವವನು ಗುರುವೊಬ್ಬನೇ. ಮಾನವರು ರಾಗದ್ವೇಷರಹಿತನಾಗಬೇಕು. ಸತ್ಕರ್ಮಗಳನ್ನು ಫಲಾಪೇಕ್ಷೆಯಿಲ್ಲದೆ ಮಾಡುತ್ತಿರಬೇಕು. ಆಗ ಕರ್ಮಫಲದ ಬಾಧ್ಯತೆಯೇ ಇಲ್ಲದಿರುವುದರಿಂದ ಪಾಪ ಪುಣ್ಯಗಳೆರಡೂ ಇಲ್ಲದ ಸಮಭಾವಸ್ಥಿತಿ ಏರ್ಪಡುತ್ತದೆ ಎಂದರು.
ಗುರುಪೂಜೆಯ ಅಂಗವಾಗಿ ಗೋಷ್ಠಿ ಗಾಯನವನ್ನು ಶಾಸ್ತ್ರಿಯವಾಗಿ ವಿದ್ವಾಂಸರುಗಳಿಂದ ನಡೆಯಿತು. ಗುರುಪೌರ್ಣಮಿ ಪ್ರಯುಕ್ತ ಯೋಗಿ ನಾರೇಯಣ ಯತೀಂದ್ರ ತಾತಯ್ಯನವರಿಗೆ ಅಭಿಷೇಕ, ರಾಜೋಪಚಾರ, ಅಷ್ಟಾವಧಾನ ಸೇವೆ ಸಮರ್ಪಣೆ ಮಾಡಲಾಯಿತು.
ಗುರುಪೂರ್ಣಮಿ ಪ್ರಯುಕ್ತ ಬೆಳಗಿನಿಂದಲೇ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ದೇವಾಲಯದಲ್ಲಿ ಪೂಜಾ ಕೈಕಂರ್ಯಗಳನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು. ನಂತರ ನಡೆದ ಗುರುಪೂಜಾ ಮಹೋತ್ಸವದಲ್ಲಿ ಸದ್ಗುರು ತಾತಯ್ಯನವರಿಗೆ ವಿಶೇಷ ಅಭಿಷೇಕವನ್ನು ಸಲ್ಲಿಸಲಾಯಿತು. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಏಳನೀರು ಮತ್ತು ಹರಿಶಿನ ಮತ್ತು ಕುಂಕುಮ, ವಿಭೂತಿ, ಶ್ರೀಗಂಧ ಮುಂತಾದ ಮಂಗಳ ದ್ರವ್ಯಗಳಿಂದ ಅಭಿಷೇಕವನ್ನು ಸಮರ್ಪಿಸಲಾಯಿತು. ರಾಜೋಪಚಾರ, ಅಷ್ಟಾವಧಾನ ಸೇವೆ ಸಮರ್ಪಣೆ ಮಾಡಿ ಮಹಾಮಂಗಳಾರತಿಯನ್ನು ಬೆಳಗಲಾಯಿತು. ಆಂಧ್ರ, ತಮಿಳು ನಾಡು ಇತರೆ ಸ್ಥಳಗಳಿಂದ ಬಂದಿದ್ದ ಸಹಸ್ರಾರು ಭಕ್ತಾದಿಗಳು ಗುರುಪೂಜೆ ಯಲ್ಲಿ ಭಾಗವಹಿಸಿದ್ದರು. ವೇದಿಕೆಯನ್ನು ಸರ್ವಾಲಂಕೃತವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆ ಸಂಕೀರ್ತನಾ ಪ್ರದಕ್ಷಿಣೆ ನಡೆಸಲಾಯಿತು.
ಇಂದಿನ ಸಂಗೀತ ಕಛೇರಿಗಳಲ್ಲಿ ಆನೂರು ಅನಂತಕೃಷ್ಣಶರ್ಮ ರವರ ನೇತೃತ್ವದಲ್ಲಿ ತಾಳವಾದ್ಯ ಕಛೇರಿ, ಮಂಜುಳ ಜಗದೀಶ್, ಇ.ರಾಮಕೃಷ್ಣಾಚಾರ್, ಕೆ.ಎಸ್.ನಾಗಭೂಷಣಯ್ಯ, ಪದ್ಮ ಚಿಂತಾಮಣಿ, ಚಿಂತಲಪಲ್ಲಿ ಕಿಶೋರ್ ಕುಮಾರ್ ಹಾಗೂ ಸೋಮಶೇಖರ್ ಮುಂತಾದವರು ಸಂಗೀತ ಸಮರ್ಪಣೆ ಮಾಡಿದರು.
ಸಂಜೆ ವಿಶೇಷ ಕಾರ್ಯಕ್ರಮವಾಗಿ ತೇಜಸ್ವಿನಿ ಮನೋಜ್ ಕುಮಾರ್, ಬೊಮ್ಮಿಶೆಟ್ಟಿ ರಘುನಾಥ್, ಕೆ.ಸುಧಾಮಣಿ ವೆಂಕಟರಾಘವನ್, ಭೈರತಿ ಆಂಜಿನಪ್ಪ, ಮಹಾಲಿಂಗಯ್ಯ ಮಠದ್ ರವರಿಂದ ಗಾಯನ, ಆರ್.ಮಂಜುನಾಥ್ ರವರಿಂದ ಸ್ಯಾಕ್ಸೋಪೋನ್, ವೇದಾಂತಂ ವಾಗ್ದೇವಿ ಪ್ರಸಾದ್ ರವರಿಂದ ಕುಚುಪೂಡಿ ನೃತ್ಯ, ಮೇಘನಾ ಟಿ.ಎಂ., ಕೇಶವ ಡ್ಯಾನ್ಸ್ ಅಕಾಡೆಮಿ ತಂಡದವರಿಂದ ಭರತನಾಟ್ಯ ಕಾರ್ಯಕ್ರಮಗಳು ನಡೆಯಿತು.
ಗುರುಪೂಜೆ ಕಾರ್ಯಕ್ರಮದಲ್ಲಿ ಕೋಲಾರ ಸಂಸದ ಮುನಿಸ್ವಾಮಿ, ಡಾ.ಜೋಸ್ಯುಲ ಸದಾನಂದಶಾಸ್ತ್ರೀ, ಲೇಖಕಿ ಅಂಬಿಕಾ ಅನಂತ್, ಹಿರಿಯ ಚಿಂತಕ ಮಲ್ಲಾರ ಪತ್ರಿಕೆ ಸಂಪಾದಕರಾದ ಡಾ||ಬಾಬುಕೃಷ್ಣಮೂರ್ತಿ, ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್, ಕೈವಾರ ಟ್ರಸ್ಟ್‌ನ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿಗಳಾದ ಆರ್.ಪಿ.ಎಂ.ಸತ್ಯನಾರಾಯಣ, ಸದಸ್ಯರುಗಳಾದ ಬಾಗೇಪಲ್ಲಿ ನರಸಿಂಹಪ್ಪ,ಬಿ.ಎಸ್.ಶ್ರೀನಿವಾಸ್, ಡಾ||ಎಂ.ವಿ.ಶ್ರೀನಿವಾಸ್, ಗಣೇಶ್ ಚಂದ್ರಪ್ಪ, ಕೆ.ಎಂ.ತ್ಯಾಗರಾಜ್ ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.