
ಕಲಬುರಗಿ,ಆ.05: ಚಂಚಲವಾದ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಂತಹ ಶಕ್ತಿ ಸಂಗೀತಕ್ಕೆ ಮಾತ್ರ ಇದೆ ಎಂದು ಹುಬ್ಬಳಿಯ ಎಸ್‍ಜೆಎಂವಿಎಸ್ ಮಹಾವಿದ್ಯಾಲಯದ ಸಂಗೀತ ವಿಭಾಗದ ಹಿರಿಯ ಪ್ರಾಧ್ಯಾಪಕಿ ಡಾ.ಜ್ಯೋತಿಲಕ್ಷ್ಮೀ ಡಿ.ಪಿ. ಅಭಿಪ್ರಾಯಪಟ್ಟರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ಸಂಗೀತ ವಿಭಾಗದ ವತಿಯಿಂದ ಸಂಗೀತ ಮತ್ತು ಮನೋವಿಜ್ಞಾನ ವಿಷಯ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ರಾಗದಿಂದ ರೋಗವು ದೂರಾಗುವುದು. ಮಾನವನ ಒತ್ತಡದ ಜೀವನದಲ್ಲಿ ಕೆಲವು ರಾಗಗಳಿಂದ ಮಾನಸಿಕ ರೋಗಗಳು ನಿಯಂತ್ರಿಸಬಹುದು. ಮನುಷ್ಯನ ನಾಡಿ ಮಿಡಿತವು ಒಂದು ಸಂಗೀತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಜಾನಕಿ ಹೊಸೂರ ಅವರು ಮಾತನಾಡಿ, ಸಂಗೀತವು ಎಂತಹವರನ್ನು ಆಕರ್ಷಿಸುವಂತ ಶಕ್ತಿ ಇದೆ. ಸಂಗೀತಕ್ಕೆ ಮೈ ಮನಗಳು ಉಲ್ಲಾಸಗೊಳ್ಳುತ್ತವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಂಗೀತ ಕಲಾವಿದರಾದ ಅಣ್ಣಾರಾವ ಮತ್ತಿಮೂಡ, ಸೈದಪ್ಪ ಚೌಡಾಪೂರ ಭಾಗವಹಿಸಿದ್ದರು. ಮಹಾವಿದ್ಯಾಲಯ ನ್ಯಾಕ್ ಮತ್ತು ಐಕ್ಯೂಎಸಿ ಸಂಯೋಜಕಿ ಡಾ.ಪುಟ್ಟಮಣಿ ದೇವಿದಾಸ ಇದ್ದರು. ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಸೀಮಾ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು, ವೀರಭದ್ರಯ್ಯ ಸ್ಥಾವರಮಠ ನಿರೂಪಿಸಿ, ವಂದಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.