ಮನಸಾಕ್ಷಿಯ ಮತ-ದೇಶಕ್ಕೆ ಹಿತ

ಕಲಬುರಗಿ.ಮೇ.06: ಕಡ್ಡಾಯ ಮತದಾನ ಮತ್ತು ನೈತಿಕ ಮತದಾನ ಮಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು `ಮತ ಕಾವ್ಯ’ ಎಂಬ ಮನಸಾಕ್ಷಿಯ ಮತ-ದೇಶಕ್ಕೆ ಹಿತ ಎಂಬ ಮಹಾಘೋಷವಾಕ್ಯದೊಂದಿಗೆವಿಶೇಷ ಜಾಗೃತಿ ಕವಿಗೋಷ್ಠಿಯನ್ನು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ನಡೆಸುವ ಮೂಲಕ ಜನರಲ್ಲಿ ಅರಿವು ಮೂಡಿಸಲು ವಿನುತನ ಪ್ರಯೋಗ ಮಾಡಿತು.
ಶನಿವಾರ ನಡೆದ ಕಾವ್ಯಧಾರೆ ಜನರ ಮನಸ್ಸು ತೆರೆದು, ಮತಗಟ್ಟೆಗೆ ತೆರಳುವಂತೆ ಪ್ರೇರನೆ ನೀಡಲು ಸಹಕಾರಿಯಾಯಿತು.
ಹಿರಿಯ ಕವಿಗಳಾದ ನರಸಿಂಗರಾವ ಹೇಮನೂರ, ಶಕುಂತಲಾ ಪಾಟೀಲ, ಡಾ. ಕೆ.ಗಿರಿಮಲ್ಲ, ಧರ್ಮಣ್ಣಾ ಹೆಚ್.ಧನ್ನಿ, ಚಂದ್ರಕಲಾ ಪಾಟೀಲ, ವೆಂಕುಬಾಯಿ ರಜಪೂತ, ಜಯಶ್ರೀ ಜಮಾದಾರ, ಮಲ್ಲಿಕಾಜುನ ಕೋಟೆ, ಎಂ.ಎನ್.ಸುಗಂಧಿ, ಪ್ರಕಾಶ ಅವರುಗಳು ಕವನ ವಾಚಿಸಿ, ಸಂವಿಧಾನಾತ್ಮಕವಾಗಿ ಪ್ರಜಾಪ್ರಭುತ್ವದ ಯಶಸ್ಸಿಗೆ ಪೂರಕವಾದ ಮತದಾನದ ಮಹತ್ವವನ್ನು ಅರಿತು ಯಾವುದೇ ಆಸೆ, ಆಮೀಷೆಗಳಿಗೆ ಒಳಗಾಗದೇ, ಜಾತಿ, ಮತ, ಧರ್ಮಗಳ ಜಾಡಿಗೆ ಒಳಗಾಗದೇ ಉತ್ತಮ ವ್ಯಕ್ತಿತ್ವದ ಅಭ್ಯರ್ಥಿಗೆ ಗುಪ್ತ ಮತದಾನದ ಮೂಲಕ ಚುನಾಯಿಸಬೇಕೆಂದ ಸಂದೇಶ ಸಾರುವ ಕವಿತೆಗಳು ಮತದಾನ ಜಾಗೃತಿಗೆ ಕನ್ನಡಿಯಂತಿದ್ದವು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಭಾರತ ವಿಶ್ವದಲ್ಲಿಯೇ ಅಗ್ರ ರಾಷ್ಟ್ರವಾಗಿದ್ದು, ಗೌಪ್ಯ ಮತದಾನ ಅದರ ಯಶಸ್ಸಿನ ಮೆಟ್ಟಿಲಾಗಿದೆ. ಸಂವಿಧಾನ ನಿರ್ಮಾತೃಗಳಾದ ಡಾ. ಬಿ.ಆರ್. ಅಂಬೇಡ್ಕರ್‍ರು ಭಾರತೀಯ ಪ್ರಜೆಗೆ ನೀಡಿದ ಏಕಮತಾಧಿಕಾರ ಅತ್ಯಂತ ಅಮೂಲ್ಯವಾದುದು. ಅದರ ಮಹತ್ವ ಅರಿತು ಪ್ರಜೆಗಳು ಮತದಾನ ಮಾಡಿದರೆ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂಬುದನ್ನು ಮನಗಂಡು ಪರಿಷತ್ತು ಈ ಪ್ರಯೋಗ ಮಾಡಿದೆ ಎಂದರು.
ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಮಾತನಾಡಿ, ಪ್ರತಿ ದಿನ ಒಂದಿಲ್ಲೊಂದು ಕಾರ್ಯಗಳಿಂದ ಕಂಗೋಳಿಸುವ ಕನ್ನಡ ಭವನ ನಿಜವಾಗಿಯೂ ಕನ್ನಡಮ್ಮನ ಅಂಗಳ ಎಂದು ಬಣ್ಣಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಲು ಪ್ರತಿಜ್ಞಾವಿಧಿ ಬೋಧಿಸಿದರು.
ಕೋಶಾದ್ಯಕ್ಷ ಶರಣರಾಜ್ ಛಪ್ಪರಬಂದಿ, ವಿನೋದ ಜೇನವೇರಿ, ರಾಜೇಂದ್ರ ಮಾಡಬೂಳ, ಬಸ್ವಂತರಾಯ ಕೋಳಕೂರ, ಹೆಚ್ ಎಸ್ ಬರಗಾಲಿ, ಎಸ್.ಎಂ.ಪಟ್ಟಣಕರ್, ಶಿವಲಿಂಗಪ್ಪ ಅಷ್ಟಗಿ, ಪ್ರಭವ ಪಟ್ಟಣಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.