ಮನವೊಲಿಕೆಗೆ ಮಣಿದ ಗ್ರಾಮಸ್ಥರು: ಸೀಲ್‍ಡೌನ್ ಆದೇಶ ವಾಪಸ್

ಬ್ಯಾಡಗಿ, ಜೂ9: ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ತಾಲೂಕಾ ಆಡಳಿತದ ಮನವೊಲಿಕೆಗೆ ಮಣಿದ ಗ್ರಾಮಸ್ಥರು ಕೊನೆಗೂ ಕೋವಿಡ್ ಪರೀಕ್ಷೆಗೆ ಸಹಕರಿಸಿದ ಹಿನ್ನಲೆಯಲ್ಲಿ ಕಂಟೋನ್ಮೆಂಟ್ ಜೋನ್ ಎಂದು ಘೋಷಣೆಯಾಗಿದ್ದ ಸಂಪೂರ್ಣ ಗ್ರಾಮದ ಸೀಲ್‍ಡೌನ್ ಆದೇಶವನ್ನು ವಾಪಸ್ ಪಡೆಯಲಾಗಿದೆ ಎಂದು ಗ್ರೇಡ್-2 ತಹಶೀಲ್ದಾರ ಗವಿಸಿದ್ದಪ್ಪ ದ್ಯಾಮಣ್ಣನವರ ತಿಳಿಸಿದ್ದಾರೆ.
ರಾಜ್ಯ ಸರ್ಕಾರ “ವೈದ್ಯರ ನಡೆ, ಹಳ್ಳಿಯ ಕಡೆ” ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ಪ್ರತಿಯೊಬ್ಬರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವ ಉದ್ದೇಶದಿಂದ ಜೂ.4ರಂದು ಗ್ರಾಮಕ್ಕೆ ತೆರಳಿದ್ದ ಆರೋಗ್ಯ ಕಾರ್ಯಕರ್ತರು ಹಾಗೂ ಕಂದಾಯ ಇಲಾಖೆ ಅಧಿಕಾರಗಳಿಗೆ ಸಹಕಾರ ನೀಡದೇ ಕೋವಿಡ್ ಪರೀಕ್ಷೆ ಹಿಂದೇಟು ಹಾಕಿದ್ದರು. ಈ ಸಂದರ್ಭದಲ್ಲಿ ಗ್ರಾಮದ ವಾಸ್ತವ ಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದ ತಹಶೀಲ್ದಾರ ಅವರು, ಜಿಲ್ಲಾಧಿಕಾರಿಗಳ ಆದೇಶದಂತೆ ಗ್ರಾಮವನ್ನು ಸಂಪೂರ್ಣವಾಗಿ ಸೀಲ್‍ಡೌನ ಮಾಡಲು ಕ್ರಮ ಕೈಗೊಂಡಿದ್ದರು.
ಸೀಲ್‍ಡೌನ್ ಆದೇಶಕ್ಕೆ ಬೆದರಿದ ಗ್ರಾಮಸ್ಥರು:
ಜಿಲ್ಲಾ ಹಾಗೂ ತಾಲೂಕಾ ಆಡಳಿತದ ಈ ಕಟ್ಟುನಿಟ್ಟಿನ ಕ್ರಮಕ್ಕೆ ಬೆದರಿದ ಗ್ರಾಮಸ್ಥರು ಇತರ ಸರ್ಕಾರಿ ಸೌಲಭ್ಯಗಳಿಗೆ ತೊಂದರೆಯಾಗುವುದನ್ನು ಅರಿತು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಒಪ್ಪಿಗೆಯ ಮೂಲಕ ಸಹಕಾರ ನೀಡಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ತಾಲೂಕಾ ಆಡಳಿತದ ವರದಿಯ ಆಧಾರದ ಮೇಲೆ ಮೂರು ದಿನಗಳ ನಂತರ ಕಟ್ಟುನಿಟ್ಟಿನ ಸೀಲ್‍ಡೌನ್ ಆದೇಶವನ್ನು ವಾಪಸ್ ಪಡೆದಿದೆ.
ಕೋವಿಡ್ ಪರೀಕ್ಷೆಗೆ ಒಳಗಾದ ಗ್ರಾಮಸ್ಥರು:
ತಹಸೀಲ್ದಾರ ಗವಿಸಿದ್ದಪ್ಪ ದ್ಯಾವಣ್ಣನವರ ಜೂ. 7ರಂದು ಗ್ರಾಮದ ಹಿರಿಯರೊಂದಿಗೆ ಮಾತನಾಡಿ, ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಕಾಳಜಿಯಿದ್ದು, ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ತೊಂದರೆ ನೀಡುವ ಉದ್ದೇಶವಿಲ್ಲ. ಗ್ರಾಮದಲ್ಲಿರುವ ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾರಿಗಾದರೂ ಸೋಂಕು ದೃಡಪಟ್ಟಲ್ಲಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುವುದು. ಈ ಬಗ್ಗೆ ಯಾವುದೇ ಆತಂಕಕ್ಕೆ ಗ್ರಾಮಸ್ಥರು ಒಳಗಾಗಬಾರದು ಎಂದು ಮನವಿ ಮಾಡಿದರು. ನಂತರ ಗ್ರಾಮದ ಹಿರಿಯರು ತಾವೇ ಖುದ್ದಾಗಿ ಅಧಿಕಾರಿಗಳ ಜೊತೆಯಾಗಿ ನಿಂತು ಪ್ರತಿಯೊಂದು ಮನೆಗೂ ತೆರಳಿ ಗ್ರಾಮಸ್ಥರ ಪರೀಕ್ಷೆ ಮಾಡಿಸಿದ್ದಾರೆ. ಕೇವಲ 80 ಕುಟುಂಬಗಳನ್ನು ಹೊಂದಿರುವ ನಾಗಲಾಪೂರ ಗ್ರಾಮದಲ್ಲಿ 90 ಜನರು ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ತಾಲೂಕಾಡಳಿತ ಗ್ರಾಮದಲ್ಲಿ ವಿಧಿಸಿದ್ದ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎನ್.ತಿಮ್ಮಾರೆಡ್ಡಿ, ಸಿಪಿಐ ಬಸವರಾಜ ಪಿ.ಎಸ್, ತಾಲೂಕಾ ಆರೋಗ್ಯಾಧಿಕಾರಿ ಸುಹೀಲ್ ಹರವಿ, ಉಪತಹಸೀಲ್ದಾರ ರವಿ ಭೋಗಾರ, ಕಂದಾಯ ನಿರೀಕ್ಷಕ ಆರ್.ಸಿ.ದ್ಯಾಮನಗೌಡ್ರ, ಪಿಡಿಓ ವಿಶ್ವನಾಥ ಕಟ್ಟೆಗೌಡ್ರ, ಗ್ರಾಮಲೆಕ್ಕಾಧಿಕಾರಿ ಬಿ.ಎನ.ಖವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.