ಮನವಿ ಹಂಚಿಕೊಂಡರೆ ಕ್ರಮ ಇಲ್ಲ: ಸುಪ್ರೀಂ

ನವದೆಹಲಿ,ಏ.೩೦- ದೇಶದಲ್ಲಿ ಕೊರೊನಾ ಸೋಂಕಿನ ಸಮಯದಲ್ಲಿ ನೆರವು ಕೇಳುವ ಅಥವಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನವಿಗಳನ್ನು ಜನರು ಹಂಚಿಕೊಂಡರೆ ಅಂತಹವರ ವಿರುದ್ಧ ರಾಜ್ಯ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ನಾಗರಿಕರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಒದಗಿಸಬೇಕು ಅದನ್ನು ಬಿಟ್ಟು ಅದನ್ನು ಹತ್ತಿಕ್ಕುವ ಕೆಲಸ ಮಾಡಬಾರದು ಹಾಗೊಂದು ವೇಳೆ ಮಾಡಿದರೆ ಇದನ್ನ ನ್ಯಾಯಾಂಗನಿಂದನೆ ಎಂದು ಪರಿಗಣಿಸುವುದಾಗಿ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.

ಸಾಮಾಜಿಕ ಜಾಲ ತಾಣದಲ್ಲಿ ನೆರವು ಕೋರುವುದು ಇಲ್ಲವೇ ಇನ್ನಿತರೆ ದೂರುಗಳ ಬಗ್ಗೆ ಮನವಿ ಮಾಡಿದರೆ ಅಂತವರ ವಿರುದ್ದ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರಗಳು ಎಫ್‌ಐಆರ್ ದಾಖಲು ಮಾಡಬಾರದು ಎಂದು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ದೇಶದಲ್ಲಿ ಆರೋಗ್ಯ ವ್ಯವಸ್ಥೆ ಸರಿಯಿಲ್ಲದ ಕಾರಣ ಕೊರೋನೋ ಸೋಂಕಿನಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ ಕಳೆದ ೨೦ ವರ್ಷಗಳಿಂದ ಏನು ಮಾಡುತ್ತಿದ್ದೀರಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಪಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಆಮ್ಲಜನಕ ಸೇರಿದಂತೆ ವೈದ್ಯಕೀಯ ಸೌಲಭ್ಯ ಸಿಗದಿರುವುದು ಕಳವಳಕಾರಿ ಸಂಗತಿ. ಇದನ್ನ ನ್ಯಾಯಪೀಠ ಗಂಭೀರವಾಗಿ ಪರಿಗಣಿಸಲಿದೆ ಎಂದು ಕೂಡ ಕೇಳಿದೆ.

ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ಖಾಸಗಿ ಔಷಧ ಉತ್ಪಾದಕ ಸಂಸ್ಥೆ ಗಳಿಗೆ ನೆರವು ನೀಡಿ ಲಸಿಕೆಯ ಹೆಚ್ಚು ಉತ್ಪಾದನೆಗೆ ಮುಂದಾಗಬೇಕು ಎಂದು ನ್ಯಾಯಾಲಯ ಹೇಳಿದೆ.

ಕೊರೋನೋ ಸೋಂಕಿನ ವಿರುದ್ಧ ಹಗಲು-ರಾತ್ರಿಯೆನ್ನದೆ ಹೋರಾಟ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು ಮತ್ತು ಸಿಬ್ಬಂದಿಗೆ ಅಗತ್ಯ ವೈದ್ಯಕೀಯ ಸೌಲಭ್ಯವನ್ನು ಒದಗಿಸುವುದು ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ