ಮನರೇಗಾ ಯೋಜನೆ ನಗರ ಪ್ರದೇಶಕ್ಕೂ ವಿಸ್ತರಿಸಲು ಒತ್ತಾಯಿಸಿ ಪ್ರತಿಭಟನೆ

ಕಲಬುರಗಿ,ಆ.1: ಕೃಷಿ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸುವಂತೆ ಹಾಗೂ ಮನರೇಗಾ ಯೋಜನೆ ನಗರ ಪ್ರದೇಶಗಳಿಗೂ ವಿಸ್ತರಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೋಮವಾರ ಕೃಷಿ ಕಾರ್ಮಿಕರ ಜಂಟಿ ವೇದಿಕೆಯ ಭಾರತೀಯ ಖೇತ್ ಮಜದೂರ್ ಯೂನಿಯನ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿ, ದೇಶದ ಜನಸಂಖ್ಯೆಯ 130 ಕೋಟಿ ಜನಸಂಖ್ಯೆ ಇದ್ದು, ಅದರಲ್ಲಿ ಸುಮಾರು 80 ಕೋಟಿ ಕಾರ್ಮಿಕರಿದ್ದಾರೆ. 80 ಕೋಟಿ ಕಾರ್ಮಿಕರಲ್ಲಿ ಗ್ರಾಮೀಣ ಮಟ್ಟದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿರುವ ಕೃಷಿ ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳಿಲ್ಲ. ಹೆಸರಿಗೆ ಮಾತ್ರ ಅಸಂಘಟಿತ ವಲಯದಲ್ಲಿ ಸೇರ್ಪಡೆ ಮಾಡಿದರೂ ಕೂಡ ಸಮಾಜಿಕ ಭದ್ರತೆಯಿಂದ ವಂಚಿತರಾಗಿರುವ ಸುಮಾರು ಇಪ್ಪತ್ತೆಂಟು ಕೋಟಿ ಕೃಷಿ ಕಾರ್ಮಿಕರು ಇದ್ದಾರೆ. ಕೃಷಿ ಕಾರ್ಮಿಕರು ವಾಸಿಸಲು ಮನೆ ಇಲ್ಲ. ಅವರಿಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಿಲ್ಲ. ಕೃಷಿ ಕಾರ್ಮಿಕರು ಸರ್ಕಾರಿ ಭೂಮಿ ಸಾಗುವಳಿ ಮಾಡುತ್ತಿದ್ದರೂ ಕೂಡ ಅರಣ್ಯ ಇಲಾಖೆಯವರು ತೊಂದರೆಕೊಡುತ್ತಿದ್ದಾರೆ. ಕೇಂದ್ರ ಸರ್ಕಾರವು ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು 8 ಕೋಟಿ ಅರಣ್ಯವಾಸಿಗಳನ್ನು ಕೃಷಿಯಿಂದ ಹೊರದೂಡಲಾಗುತ್ತಿದೆ ಎಂದು ಆರೋಪಿಸಿದರು.
ಮನರೇಗಾ ಅಡಿಯಲ್ಲಿ ವರ್ಷದಲ್ಲಿ 200 ದಿನಗಳ ಕೆಲಸ 600ರೂ.ಗಳ ದಿನಗೂಲಿ ಮೇಟಿಗಳಿಗೆ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ಸೇವಾ ಭದ್ರತೆ. ಸಮಯಕ್ಕೆ ಸರಿಯಾಗಿ ವೇತನ ಪಾವತಿ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸುವಂತೆ, 55 ವರ್ಷ ದಾಟಿದ ಎಲ್ಲ ಕೃಷಿ ಕೂಲಿಕಾರರಿಗೆ ಮತ್ತು ಇತರ ಗ್ರಾಮೀಣ ಕೆಲಸಗಾರರಿಗೆ ತಿಂಗಳಿಗೆ 5000ರೂ.ಗಳ ದರದಲ್ಲಿ ನಿವೃತ್ತಿ ವೇತನ. ಶೌಚಾಲಯ, ಅಡುಗೆ ಮನೆ ಕೈತೋಟ, ದನದ ಕೊಟ್ಟಿಗೆಯನ್ನು ಒಳಗೊಂಡ ಹಿತ್ತಲು ಸಹಿತದ ಪಕ್ಕಾ ಮನೆ ನೀಡುವುದನ್ನು ಖಚಿತ ಪಡಿಸುವಂತೆ, ಮನೆ ಕಟ್ಟಲು ನೀಡುವ ಅನುದಾನವನ್ನು ಕೇಂದ್ರದಿಂದ 5 ಲಕ್ಷ ಮತ್ತು ರಾಜ್ಯ ಸರ್ಕಾರದಿಂದ 5 ಲಕ್ಷ ರೂ.ಗಳನ್ನು ನೀಡುವಂತೆ ಅವರು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಧೃಡವಾದ ಮುತುವರ್ಜಿ ವಹಿಸಿ ಪ್ರಗತಿಪರ ಭೂ ಸುಧಾರಣೆಗಳನ್ನು ಜಾರಿಗೆ ತರುವಂತೆ, ಸ್ವಾತಂತ್ರ್ಯ ದೊರೆತು 75 ವರ್ಷಗಳ ನಂತರ ಆದರೂ ಊಳುವವನಿಗೆ ಭೂಮಿಯನ್ನು ಕೊಡುವ ಅಂದಿನ ಭರವಸೆಯನ್ನು ಜಾರಿಗೆ ತರುವಂತೆ, ಸರ್ಕಾರಿ ಭೂಮಿಯನ್ನು ಭೂರಹಿತ ದಲಿತರಿಗೆ, ಕೃಷಿ ಕೂಲಿಕಾರರಿಗೆ ಬುಡಕಟ್ಟು ಸಮುದಾಯಗಳಿಗೆ ಮತ್ತು ಬಡರೈತರಿಗೆ ಅಗತ್ಯ ಆರ್ಥಿಕ ನೆರವಿನೊಂದಿಗೆ ಮತ್ತು ಭೂ ಒಡೆತನದ ಹಕ್ಕನ್ನು ವಿತರಿಸುವಂತೆ, ಎಸ್.ಸಿ ಮತ್ತು ಎಸ್.ಟಿ ಸಮುದಾಯಳಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಭೂಮಿ ವಿತರಣೆಯೊಂದಿಗೆ 2013ರ ಭೂಸ್ವಾಧಿನ ಕಾಯ್ದೆಯನ್ನು ಜಾರಿಗೆ ತರುವಂತೆ, ಪುನವರ್ತಿಸತಿ ಕಲ್ಪಿಸದೆ ಯಾರನ್ನು ಒಕ್ಕಲೆಬ್ಬಿಸಬಾರದು ಎಂದು ಅವರು ಆಗ್ರಹಿಸಿದರು.
ಪುನರ್ವಸತಿ ಕೇಂದ್ರಗಳಲ್ಲಿ ವಾಸಲ್ಲೆ ಸಮರ್ಪಕ ಮನೆ, ಆರೋಗ್ಯ ಹಾಗೂ ಶಿಕ್ಷಣ ಸೌಲಭ್ಯಗಳನ್ನು ತಪ್ಪದೆ ಒದಗಿಸುವಂತೆ, ಅರಣ್ಯ ಹಕ್ಕುಗಳ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡುವಂತೆ, ಅರಣ್ಯವಾಸಿಗಳ ಜೀವನ ನಿರ್ವಹಣೆಯ ಹಕ್ಕುಗಳಿಗೆ ರಕ್ಷಣೆ ನೀಡುವಂತೆ, ಉದ್ಯೋಗ ಸೃಷ್ಟಿಗಾಗಿ ಮತ್ತು ಪರಿಸರ ರಕ್ಷಣೆಗಾಗಿ ಕೇಂದ್ರ ಮತ್ತು ಇತರ ಗ್ರಾಮೀಣ ಕೆಲಸಗಾರರಿಗೆ ಉದ್ಯೋಗ ಒದಗಿಸುವಂತೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವಂತೆ ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಎಂ.ಬಿ. ಸಜ್ಜನ್, ಮೌಲಾ ಮುಲ್ಲಾ, ಚಂದಪ್ಪ ಪೂಜಾರಿ, ಜಗದೇವಿ ಚಂದನಕೇರಾ, ಬಾಬು ಹೊಸಮನಿ, ಸಾರಿಪುತ್ರ ಹೊಸಮನಿ, ಪ್ರದೀಪ್ ತಿಲ್ಲಾಪೂರ್, ಜಾವೇದ್, ಮಲ್ಲಮ್ಮ ಕೋಡ್ಲಿ, ಸಿದ್ಧರಾಮ್ ಹರವಾಳ್ ಮುಂತಾದವರು ಪಾಲ್ಗೊಂಡಿದ್ದರು.