ಮನರೇಗಾ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ಸಂಜೆವಾಣಿ ವಾರ್ತೆ
ಹನೂರು: ಆ.13:- ಮಾರ್ಟಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಮನರೇಗಾ ಯೋಜನೆಯಡಿ ರೈತರ ಜಮೀನುಗಳಿಗೆ ಗಿಡ ನೆಡುವ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದು ಲಕ್ಷಾಂತರ ರೂ ಆಕ್ರಮ ಆಗಿರುವುದಕ್ಕೆ ಸ್ಪಷ್ಟ ಪುರಾವೆಯಾಗಿ ಓರ್ವ ವಿದ್ಯಾ ವಂತ ಯುವ ರೈತನ ದೂರಿ ನಿಂದ ಒಂದು ಪ್ರಕರಣವಷ್ಟೆ ಬೆಳಕಿಗೆ ಬಂದಿದ್ದು ಗಿಡ ನೆಡುವ ಕಾಮಗಾರಿಗಳ ಇಡೀ ಪ್ರಕರಣ ದ ಬಗ್ಗೆ ತೀವ್ರ ತನಿಖೆ ನಡೆಸಿದಲ್ಲಿ ಮತ್ತಷ್ಟು ರೋಚಕ ಸತ್ಯ ಬೆಳಕಿಗೆ ಬರುವ ಸಾಧ್ಯತೆಗಳು ನಿಚ್ಚಳವಾಗಿವೆ.
ದಿವ್ಯಾನಂದನ ದೂರಿನ ಪ್ರಕರಣದ ತನಿಖೆ ನಡೆದು ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾರ್ಟಳ್ಳಿ ಗ್ರಾಮ ಪಂಚಾಯ್ತಿಯ ಪಿಡಿಓ ಬಾಲಗಂಗಾಧರ್ ರಿಂದ ಶೇ 50 ಪಾಲು ಅಂದರೆ 48,749 ಹಾಗೂ ಇದೇ ಪಂಚಾಯ್ತಿಯ ತಾಂತ್ರಿಕ ಸಹಾಯಕ ಎಂ.ಪ್ರದೀಪ್ ಕುಮಾರ್‍ರಿಂದ ಶೇ 50 ಪಾಲುಗಳಂತೆ 48,749 ರೂಗಳಂತೆ ಒಟ್ಟು 97,498 ರೂ ಗಳನ್ನು ವಸೂಲು ಮಾಡಿ ಸಂಬಂಧಿಸಿದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲು ಸಿಇಓಗೆ ಪ್ರರಕಣದ ತನಿಖೆ ನಡೆಸಿದ ಓಂಬುಡ್ಸ್ ಮನ್ ಎನ್.ಎಸ್ ಮಹಾದೇವಸ್ವಾಮಿ ಆದೇಶ ನೀಡಿರುವುದು ಅಕ್ರಮಕ್ಕೆ ಸ್ಪಷ್ಟ ಪುರಾವೆಯಾಗಿದೆ.
“ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ”..!
ವಡ್ಡರದೊಡ್ಡಿ ಗ್ರಾಮದ ಯುವ ವಿದ್ಯಾವಂತ ರೈತ ದಿವ್ಯಾನಂದ ಎಂಬುವರ ತಂದೆ ಮದಲೈಸ್ವಾಮಿಯವರ ಬ್ಯಾಂಕ್ ಖಾತೆಗೆ ಅ 22 ರ 2022 ರಂದು ದಿಢೀರನೆ 25 ಸಾವಿರ ರೂ ಬರುತ್ತೆ. ಅವರು ಅವಿದ್ಯಾವತರಾದ್ದರಿಂದ, ಅವರ ಪುತ್ರ ದಿವ್ಯಾನಂದ ಇದಾವುದಪ್ಪ ನಮ್ಮ ಅಪ್ಪನ ಖಾತೆಗೆ ಹಣ ಬಂದಿದೆ ಎಂದು ಮೂಲ ಹುಡುಕಲು ಹೋದಾಗ ಮನರೇಗಾ ಯೋಜನೆಯ ಕಾಮಗಾರಿಯಲ್ಲಿ ಕೂಲಿ ಮಾಡಿದ ಹಣ ಎಂದು ತಿಳಿದು ಬರುತ್ತದೆ.
ಆದರೆ ವಾಸ್ತವದಲ್ಲಿ ಜಾಬ್ ಕಾರ್ಡ್ ಹೊಂದಿದ್ದರೂ ಸಹ ಯಾವುದೇ ಕೆಲಸಕ್ಕೆ ಹೋಗದಿದ್ದರೂ ಕೂಲಿ ಹೇಗೆ ಬಂತು ಎಂದು ಮೂಲ ಹುಡುಕಿದಾಗ ದೊಡ್ಡ ಹಗರಣವೇ ಬೆಳಕಿಗೆ ಬಂದಿದೆ.
ದಿವ್ಯಾನಂದನ ಕುಟುಂಬದರ?ಯಾರು ಮಾರ್ಟಳ್ಳಿ ಪಂಚಾಯ್ತಿಗೆ ಮನರೇಗಾ ಯೋಜನೆಯಡಿ ಅನುಕೂಲ ಕಲ್ಪಿಸಿಕೊಡುವಂತೆ ಕೋರದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿ ಜಮೀನಿನಲ್ಲಿ ಇಲ್ಲದಿದ್ದರೂ ರಕ್ತ ಚಂದನ ಹಾಗೂ ಶ್ರೀಗಂಧದ ಗಿಡಗಳನ್ನು ನರೇಗಾ ಯೋಜನೆಯಡಿ ನೆಟ್ಟಿರುವುದಾಗಿಯೂ ಅದರ ಅಂದಾಜು ಮೊತ್ತ 2-50 ಲಕ್ಷ ಎಂತಲೂ ನಾಮಫಲಕ ಅಳವಡಿಸಿ 7 ಎಂಎನ್‍ಆರ್‍ಗಳನ್ನು ತೆಗೆದು 97,498 ರೂಗಳನ್ನು ಕೂಲಿ ಪಾವತಿಸಿ ಸುಳ್ಳು ದಾಖಲೆ ಸೃಷ್ಟಿ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಯುವ ರೈತ ದಿವ್ಯಾನಂದ ಪಿಡಿಓ ಬಾಲಗಂಗಾಧರ್ ರವರನ್ನು ಭೇಟಿ ಮಾಡಿ ನಮ್ಮ ಕುಟುಂಬದವರು ಯಾವುದೇ ಕೂಲಿ ಕೆಲಸಕ್ಕೆ ಬಂದಿಲ್ಲ. ಹಾಗಿದ್ದರೂ ಕೂಲಿ ಹಣ ಅಂತಾ ಹೇಗೆ ಹಾಕಿದ್ದೀರಿ. ಎಂದು ವಿಚಾರಿಸಿದಾಗ, ಈ ಯೋಜನೆಯಿಂದ ನಿಮಗೆ ಹೆಚ್ಚಿನ ಹಣ ಬರುತ್ತದೆ ಯಾವುದನ್ನು ಪ್ರಶ್ನೆ ಮಾಡದೆ ತೆಪ್ಪಗಿರಿ ಎಂದು ಧಮಕಿ ಹಾಕಿದ್ದಲ್ಲದೆ ಕೆಲ ಪಂಚಾಯ್ತಿ ಸದಸ್ಯರು ಮತ್ತಿತರರ ಕಡೆಯಿಂದ ಹಲ್ಲೆಗೂ ಮುಂದಾಗಿ ಪ್ರಾಣ ಬೆದರಿಕೆ ಪ್ರಕರಣವೂ ನಡೆದಿದೆ.
ಪಿಡಿಓ ಬಾಲಗಾಂಗಾಧರ್ ಮತ್ತಿತರೆ ಕೆಲ ಸದಸ್ಯರ ವಿರುದ್ದ ರಾಮಾಪುರ ಠಾಣೆಗೆ ದೂರು ನೀಡಿದರೂ ಅವರು ಎಫ್‍ಐಆರ್ ದಾಖಲಿಸಿಲ್ಲ ಎಂದು ದೂರಿದ್ದಾರೆ. ಈ ಬಗ್ಗೆ ಹಿರಿಯ ಪೆÇಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಪಂಚಾಯತ್ ರಾಜ್ ಇಲಾಖೆಯಿಂದ ಚಾಮರಾಜನಗರದ ಓಂಬುಡ್ಸ್ ಮನ್‍ರವರಿಗೆ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ನಿರ್ದೇಶನ ನೀಡಿದ ನಂತರ ಓಂಬುಡ್ಸ್ ಮನ್ ರವರ ವಿಚಾರಣೆಯಿಂದ ಅಸಲಿ ಸತ್ಯ ಸಂಗತಿ ಬೆಳಕಿಗೆ ಬಂದಿದೆ. ಓಂಬುಡ್ಸ್ ಮನ್ ರವರ ಭೇಟಿಯ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ವತಿಯಿಂದ ಯಾವುದೇ ಗಿಡ ನೆಡುವ ಕಾಮಗಾರಿ ಕೈಗೊಳ್ಳದಿರುವುದು ಕಂಡು ಬಂದಿದೆ.
ಈ ಎಲ್ಲಾ ಅಕ್ರಮಗಳ ಹಿನ್ನೆಲೆಯಲ್ಲಿ ಪಂಚಾಯತಿ ಪಿಡಿಓ ಬಾಲಗಂಗಾಧರ್ ಹಾಗೂ ತಾಂತ್ರಿಕ ಸಹಾಯಕ ಪ್ರದೀಪ್ ಕುಮಾರ್ ಶಾಮೀಲಾಗಿ ನಡೆಯದ ಕಾಮಗಾರಿಗೆ ನಕಲಿ ದಾಖಲೆ ಸೃಷ್ಟಿಸಿ ಗೋಲ್ ಮಾಲ್ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವರಿಂದ ವಸೂಲಿಗೆ ಆದೇಶಿಸಲಾಗಿದೆ.
ಮನರೇಗಾ ಯೋಜನೆಯಲ್ಲಿ ಈ ಪಂಚಾಯ್ತಿಯಲ್ಲಿ 80 ರಿಂದ 100 ಕೋಟಿಯಷ್ಟು ಕಾಮಗಾರಿ ನಡೆದಿದ್ದು ಸ್ಥಳೀಯ ಜನ ಸಾಮಾನ್ಯರು ಮಾತನಾಡಿಕೊಳ್ಳುವಂತೆ ಎಲ್ಲದರಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಜಗಜ್ಜಾಹೀರಾಗಿದ್ದು ಮನರೇಗಾ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳು ಹಾಗೂ ಈ ಸಂಬಂಧದ ಕಡತಗಳನ್ನು ಸಮಗ್ರ ತನಿಖೆ ಮಾಡಿದಲ್ಲಿ ಮತ್ತಷ್ಟು ಅಕ್ರಮಗಳು ಬೆಳಕಿಗೆ ಬರುವುದರಲ್ಲಿ ಸಂಶಯವೇ ಇಲ್ಲ. ಜಿಲ್ಲಾಡಳಿತ ಈ ಬಗ್ಗೆ ಪರಿಣಾಮಕಾರೀ ಕ್ರಮಕ್ಕೆ ಮುಂದಾಗುವುದೇ ಕಾದು ನೋಡೋಣ…