
ಕಲಬುರಗಿ,ಆ.18-ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ ಪ್ರಕಾರ ಕೆಲಸ ಬಯಸಿದವರಿಗೆ ಕಡ್ಡಾಯವಾಗಿ ಕೆಲಸ ಒದಗಿಸಲು ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಸ್ವೀಕೃತಿ ಕೊಡಬೇಕು. ಸ್ವೀಕೃತಿ ಕೊಡದ ಸಂಬಂಧ ಪಟ್ಟವರ ಮೇಲೆ ಕ್ರಮ ವಹಿಸಬೇಕು. ಇಕೆವೈಸಿ ಕಡ್ಡಾಯ ಗೊಳಿಸಿ ಕೆಲಸ ದೊರೆಯದಂತೆ ಮಾಡಿರುವುದನ್ನು ಕೈಬಿಡಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷರಾದ ಕೆ.ನೀಲಾ ಮತ್ತು ಗೌರಮ್ಮ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಸಚಿವರಿಗೆ ಮನವಿಪತ್ರ ಸಲ್ಲಿಸಿರುವ ಅವರು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸಚಿವರು ಸಭೆ ಕರೆದಿರುವುದನ್ನು ಶ್ಲಾಘಿಸಿದ್ದಾರೆ.
ಕೇವಲ ಇಪ್ಪತ್ತು ಕಾಮಗಾರಿಗಳ ಮಿತಿಯನ್ನು ಕೈಬಿಡಬೇಕು, ಎನ್ ಎಂ ಎಂ ಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ) ರದ್ದುಗೊಳಿಸಬೇಕು, ಆಧಾರ ಬೇಸ್ಡ್ ಪೇಮೆಂಟ್ ಸಿಸ್ಟಂ (ಎಬಿಪಿಎಸ್) ರದ್ದುಗೊಳಿಸಬೇಕು, ಮನರೇಗಾ ಕಾರ್ಮಿಕರನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರೆಂದು ಪರಿಗಣಿಸಬೇಕು, ಮನರೇಗಾದಲ್ಲಿ ಕೆಲಸ ಬಯಸುವ ಒಂಟಿ ಮಹಿಳೆಯರು, ದಲಿತ ಮಹಿಳೆಯರು, ಅಂಗವಿಕಲಚೇತನ ಮಹಿಳೆಯರು, ಟ್ರಾನ್ಸಜೆಂಡರ್ ಮಹಿಳೆಯರು ಮತ್ತು ದೇವದಾಸಿ ಮಹಿಳೆಯರಿಗೆ ವರ್ಷದುದ್ದಕ್ಕು ನೂರು ದಿನಗಳ ಮಿತಿ ಇಲ್ಲದೆ ಕೆಲಸ ಒದಗಿಸಬೇಕು ಹಾಗೂ ಕರ್ನಾಟಕ ಸರಕಾರ ಜಾರಿಗೆ ತಂದಿರುವ ಕೃಷಿರಂಗದ ಕನಿಷ್ಠ ಕೂಲಿ 424 ರೂಗಳನ್ನು ಉದ್ಯೋಗ ಖಾತ್ರಿಯಲ್ಲಿ ಜಾರಿಗೊಳಿಸಬೇಕು, ಮೇಟಿಗಳಿಗೆ ಅವರ ಉದ್ಯೋಗಕ್ಕಾಗಿ ವೇತನ ಒದಗಿಸಬೇಕು, ಕೋರಿಕೆಯ ಮೇರೆಗೆ ಕನಿಷ್ಠ 100 ದಿನ ಉದ್ಯೋಗ ಕೊಡಲಾಗದ ಕುಟುಂಬಗಳಿಗೆ ಆ ದಿನಗಳನುಸಾರ ನಿರುದ್ಯೋಗ ಭತ್ಯೆಯನ್ನು ಖಾತರಿಪಡಿಸಬೇಕು, ಪಟ್ಟಣ/ ನಗರ ಪ್ರದೇಶಕ್ಕೂ ಪಟ್ಟಣ/ ನಗರ ಉದ್ಯೋಗ ಖಾತರಿ ಕಾಯ್ದೆ ಜಾರಿಗೊಳಿಸಬೇಕು, ಉದ್ಯೋಗ ಖಾತ್ರಿ ಕೆಲಸಗಾರರಿಗೆ ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸಬೇಕು, ಮಸಣ/ ಸ್ಮಶಾನ ಗಳಲ್ಲಿ ಶವ ಸಂಸ್ಕಾರಕ್ಕಾಗಿ ಗುಳಿ/ ಕುಣಿ ಅಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಬೇಕು, ನಾಟಿ ಮಾಡುವ ಮತ್ತು ಕೊಯ್ಲು ಮಾಡುವ ಕೆಲಸವನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಬೇಕು, ವಸತಿ ಹಾಗೂ ನಿವೇಶನ ರಹಿತ ಬಡವರ ಮನೆ ಕಟ್ಟಡದ ಕೆಲಸವನ್ನು ಉದ್ಯೋಗ ಖಾತ್ರಿ ಕೆಲಸಕ್ಕೆ ಸೇರ್ಪಡೆ ಮಾಡಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮನರೇಗಾವನ್ನು ಸಮರ್ಪಕವಾಗಿ ಜಾರಿಗೊಳಿಸಲು ಪ್ರತ್ಯೇಕ ಸಿಬ್ಬಂದಿ, ಕಚೇರಿ ಮತ್ತಿತರ ಮೂಲ ಸಂಪನ್ಮೂಲಗಳನ್ನು ಒದಗಿಸಬೇಕು. ತನ್ಮೂಲಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲಿನ ಕೆಲಸದ ಹೊರೆಯನ್ನು ತಗ್ಗಿಸಬಹುದು ಎಂದು ಸಲಹೆ ನೀಡಿದ್ದಾರೆ.