ಮನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ಶಿಬಿರ


ಸಂಜೆವಾಣಿ ವಾರ್ತೆ
ಕಾರಟಗಿ:ಮೇ:20: ತಾಲೂಕಿನ ಬೆನ್ನೂರು ಹಾಗೂ ಬೂದಗುಂಪಾ ಗ್ರಾಮ ಪಂಚಾಯತಿಯ ಕೂಲಿಕಾರರಿಗೆ ನರೇಗಾದಡಿ ಬೆನ್ನೂರು ಜಿನುಗೂ ಕೆರೆ ಹೂಳೆತ್ತುವ ಕೆಲಸ ನೀಡಲಾಗಿದ್ದು, ಕಾಮಗಾರಿ ಸ್ಥಳದಲ್ಲಿ ಇಂದು ಗ್ರಾಮ ಪಂಚಾಯತಿ ಹಾಗೂ ಕರ್ನಾಟಕ ಆರೋಗ್ಯ ಅಮೃತ ಅಭಿಯಾನ ಅವರ ಸಹಯೋಗದಲ್ಲಿ ಕೂಲಿಕಾರರಿಗೆ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡು ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.
ಈ ವೇಳೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಭಾಗ್ಯೇಶ್ವರಿ ಅವರು ಮಾತನಾಡಿ ಕೂಲಿಕಾರರಿಗೆ ಕೆಲಸ ಕೊಡುವುದಷ್ಟೇ ಅಲ್ಲದೇ, ಕೂಲಿಕಾರರ ಆರೋಗ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಇಂದು ಆರೋಗ್ಯ ಶಿಬಿರವನ್ನು ಆಯೋಜಿಸಿದ್ದು, ಕೂಲಿಕಾರರು ಇದರ ಸದುಪಯೋಗ ಪಡೆಯಲು ತಿಳಿಸಿದರು. ನಂತರ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೂಲಿಕಾರರ ಬಿಪಿ, ಶುಗರ್‌ ಸೇರಿದಂತೆ ಇನ್ನಿತರ ಸಣ್ಣಪುಟ್ಟ ಖಾಯಿಲೆಗಳ ಕುರಿತು ತಪಾಸಣೆ ನಡೆಸಿ, ಮಾತ್ರೆಗಳನ್ನು ನೀಡಿದರು. ಶಿಬಿರದಲ್ಲಿ 338 ಕೂಲಿಕಾರರರು ತಮ್ಮ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ ಪಂ ಆರೋಗ್ಯ ಅಮೃತ ಅಭಿಯಾನದ ತಾಲೂಕು ಸಂಯೋಜಕ ನಿರುಪಾದಿ, ಬೆನ್ನೂರು ಮತ್ತು ಬೂದಗುಂಪಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಸಿಬ್ಬಂದಿಗಳು, ಬಿಎಫ್ಟಿಗಳು, ಗ್ರಾಮ ಕಾಯಕ ಮಿತ್ರರು ಇದ್ದರು.