‘ಮನಪಾಗೆ ಸ್ಮಾರ್ಟ್ ಸಿಟಿ ನಿಧಿ ಖಾಲಿ ಮಾಡುವ ಆತುರ’

ಮಂಗಳೂರು, ನ.೧೨- ನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಗೆ ಮಂಜೂರು ಮಾಡಿದ ಹಣವನ್ನು ಖಾಲಿ ಮಾಡುವ ಆತುರದಲ್ಲಿದೆ ಎಂದು ಮಂಗಳೂರು ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್ ಆರೋಪಿಸಿದ್ದಾರೆ.

ನಿನ್ನೆ ಇಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, “ಮನಪಾ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳ ನಡುವೆ ಯಾವುದೇ ಸಮನ್ವಯವಿಲ್ಲ. ಒಂದೇ ಸಮಯದಲ್ಲಿ, ಆರು ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಇದು ನಗರದಲ್ಲಿ ಸಾಕಷ್ಟು ಗೊಂದಲ ಮತ್ತು ಸಂಚಾರ ದಟ್ಟಣೆಗೆ ಕಾರಣವಾಯಿತು. ಯಾವುದೇ ಸರಿಯಾದ ದೃಷ್ಟಿಕೋನ, ಯೋಜನೆಯಿಲ್ಲದೆ ಸ್ಮಾರ್ಟ್ ಸಿಟಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ” ಎಂದು ದೂರಿದರು.

ಸ್ಮಾರ್ಟ್ ಸಿಟಿ ಎಂದರೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಕ್ರಮ. ಆದರೆ ನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರವಾಸೋದ್ಯಮವನ್ನು ಆಕರ್ಷಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಆಡಳಿತವನ್ನು ಹೇಗೆ ನಡೆಸುವುದು ಎಂದು ಬಿಜೆಪಿಗೆ ತಿಳಿದಿಲ್ಲ. ಹಾಗೆಯೇ ಬಿಜೆಪಿಗೆ ಅನುಭವದ ಕೊರತೆಯಿದೆ ಎಂದು ಹೇಳಿದರು. ಮಾಜಿ ಮೇಯರ್‌ಗಳಾದ ಭಾಸ್ಕರ್ ಮೊಯ್ಲಿ, ಜಸಿಂತಾ ಆಲ್ಫ್ರೆಡ್, ಕಾರ್ಪೊರೇಟರ್ ಲ್ಯಾನ್ಸ್ ಲಾಟ್ ಪಿಂಟೊ, ಲತೀಫ್ ಕಂದಕ, ಎ ಸಿ ವಿನಯರಾಜ್ ಮತ್ತು ಇತರರು ಉಪಸ್ಥಿತರಿದ್ದರು.