ಮನದ ಸೌಂದರ್ಯ ಹೆಚ್ಚಿಸುವ ಪುಸ್ತಕಗಳು; ಆರ್.ಜಿ ಹಳ್ಳಿ ನಾಗರಾಜ್

ಹರಿಹರ.ಮೇ.೨೩: ಕವಿತೆಗಳು ವ್ಯಕ್ತಿ ಬದಲಾವಣೆಯ ಜೊತೆಗೆ ಸಾಮಾಜಿಕ ಪರಿವರ್ತನೆಗೂ ದಾರಿ ಮಾಡಿಕೊಡುತ್ತವೆ. ಒಂದು ಒಳ್ಳೆಯ ಪುಸ್ತಕ ಒಬ್ಬ ಒಳ್ಳೆಯ ಸ್ನೇಹಿತನಿದ್ದಂತೆ ಎಂದು ಬಂಡಾಯ ಸಾಹಿತಿ ಆರ್.ಜಿ ಹಳ್ಳಿ ನಾಗರಾಜ್ ಪ್ರತಿಪಾದಿಸಿದರು.ನಗರದ ಕಾಳಿದಾಸ ವಿದ್ಯಾಸಂಸ್ಥೆ ಆವರಣದಲ್ಲಿ ಸಾಹಿತಿ ಹೆಚ್.ಕೆ.ಕೊಟ್ರಪ್ಪ ಇವರು ರಚಿಸಿದ ‘ಅವ್ವ ಹಚ್ಚಿದ ದೀಪ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಕೋಟಿಗೂ ಅಧಿಕ ವೆಚ್ಚದಲ್ಲಿ ಕಟ್ಟುವ ಮನೆಯಲ್ಲಿ ಸೌಂದರ್ಯಕ್ಕಾಗಿ ನಿರ್ಜೀವ ಗೊಂಬೆಗಳನ್ನು ಇಡಲು ಗೂಡು ಕಟ್ಟುತ್ತಾರೆ. ಆದರೆ ಮನದ ಸೌಂದರ್ಯ ಹೆಚ್ಚಿಸುವ ಒಳ್ಳೆಯ ಪುಸ್ತಕಗಳನ್ನು ಇಡಲು ಗೂಡು ಕಟ್ಟುವುದು ವಿರಳ ಎಂದರು.ಇಂದಿನ ಮಕ್ಕಳು ಮೊಬೈಲ್, ಟಿವಿಗಳಿಗೆ ಮಾರು ಹೋಗಿ ಪುಸ್ತಕ ಓದುವ ಹವ್ಯಾಸ ಮರೆತು ಬಿಟ್ಟಿದ್ದಾರೆ. ಟಿ.ವಿ., ಮೊಬೈಲ್‌ಗಳಿಂದ ಸಿಗದ ಮನೋವಿಕಾಸ ಸಾಹಿತ್ಯ ಅಭ್ಯಾಸದಿಂದ ಸಿಗುತ್ತದೆ. ಮಕ್ಕಳಿಗೆ ಪುಸ್ತಕ ಓದುವ ರೂಢಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ ಎಂದರು.ಹೆಚ್.ಕೆ.ಕೊಟ್ರಪ್ಪ ತಮ್ಮ ವೃತ್ತಿ ಬದುಕಿನ ಘಟನಾವಳಿಗಳನ್ನು ಕವನಗಳ ಮೂಲಕ ಸಮಾಜದಲ್ಲಿ ಬೆಳಕು ಚೆಲ್ಲುವ ಕಾರ್ಯ ಮಾಡಿದ್ದಾರೆ. ಇವರು ರಚಿಸಿರುವ ಕವನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ತಾವು ರಚಿಸಿರುವ ಕವನಗಳನ್ನು ತಮ್ಮ 50ನೇ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಪುಸ್ತಕ ರೂಪದಲ್ಲಿ ಹೊರ ತರುತ್ತಿರುವುದು ಒಳ್ಳೆಯ ಕಾರ್ಯ ಎಂದರು.ಹಾವೇರಿ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿ, “ಒಲಿ ಚಲೋ ಇದ್ದರೆ, ತೆಲಿ ಚಲೋ ಇರುತ್ತದೆ” ಯಾವ ಕುಟುಂಬದಲ್ಲಿ ಮನೆಯ ಯಜಮಾನಿಯ ಸಹಕಾರ ಇರುತ್ತದೆಯೋ ಆ ವ್ಯಕ್ತಿಯು ಸಾಮಾಜಿಕವಾಗಿ ಕೌಟುಂಬಿಕವಾಗಿ ಸಾಧನೆ ಮಾಡಲು ಸಾಧ್ಯ ಎಂದರು.ಒಬ್ಬ ಕಾರ್ಮಿಕ ಮುಖಂಡನಾಗಿ ಹೋರಾಟದ ಜೊತೆಗೆ ತಮ್ಮ ಕುಟುಂಬದ ಜವಾಬ್ದಾರಿಯ ನಿರ್ವಹಣೆಯೊಂದಿಗೆ ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿರುವುದು ಕುಟುಂಬದ ಸಹಕಾರ ಇದ್ದಾಗ ಮಾತ್ರ ಸಾಧ್ಯ ಎಂದರು.