
ಲಕ್ಷೇಶ್ವರ.ಮೇ.೫; ಮನೆಯ ಸಿರಿವಂತಿಕೆ ನಾಗರೀಕತೆಯ ಸಂಕೇತವಾದರೆ ಮನದ ಸಿರಿವಂತಿಕೆ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು ಅವರು ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಬಾಳಿನ ಕಹಿಯನ್ನು ಸಿಹಿಯನ್ನಾಗಿ ಕತ್ತಲೆಯನ್ನು ಬೆಳಕಾಗಿ ಮುಳ್ಳನ್ನು ಹೂವಾಗಿ ತಿಳಿದು ನಡೆದಾಗ ಬದುಕು ಸುಂದರಗೊಳ್ಳುತ್ತದೆ. ಶ್ರದ್ಧೆ, ಉದ್ಯೋಗಶೀಲತೆ, ನಿರ್ಭಯ, ಸಾತ್ವಿಕತೆ, ಅಹಿಂಸೆ, ದಯೆ ಮೊದಲಾದ ಗುಣಗಳು ಮನುಷ್ಯನಿಗೆ ಯಾವಾಗಲೂ ಗೌರವ ತಂದು ಕೊಡುತ್ತವೆ. ದೇಹಶುದ್ಧಿ ನುಡಿಶುದ್ಧಿ ಮತ್ತು ಮನಶುದ್ಧಿಯಿಂದ ಬಾಳುವುದೇ ಜೀವನದ ಶ್ರೇಯಸ್ಸಿಗೆ ಕಾರಣವಾಗುತ್ತದೆ. ಬದುಕು ಮನೆಯ ಕಿಡಕಿ ಇದ್ದಂತೆ. ತೆರೆದರೆ ಬೆಳಕು ಇಲ್ಲದಿದ್ದರೆ ಕತ್ತಲು. ಹಾಗೆಯೇ ಶ್ರಮ ವಹಿಸಿ ದುಡಿದರೆ ಸುಖ ಇಲ್ಲದಿದ್ದರೆ ಕಷ್ಟ ತಪ್ಪಿದ್ದಲ್ಲ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಅಂತರAಗ ಮತ್ತು ಬಹಿರಂಗ ಶುದ್ಧಿ ಎರಡಕ್ಕೂ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಜಾತ್ರೆಗಳಿಂದ ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆ ಮೂಡಿ ಬರಲು ಸಾಧ್ಯವಾಗುತ್ತದೆ ಎಂದರು.ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಗಂಜಿಗಟ್ಟಿ ಶಿವಲಿಂಗ ಶಿವಾಚಾರ್ಯರು, ಬನ್ನಿಕೊಪ್ಪದ ಡಾ.ಸುಜ್ಞಾನದೇವ ಶಿವಾಚಾರ್ಯರು, ಬೆಳ್ಳಟ್ಟಿ ಬಸವರಾಜ ಸ್ವಾಮಿಗಳು, ಸಂಕದಾಳ ಶಿವಯೋಗಿ ವಾಗೀಶ ಹಾಲಸ್ವಾಮಿಗಳು ಸಮಾರಂಭದಲ್ಲಿ ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಮಹಾಂತೇಶ ಹವಳದ ಸರ್ವರನ್ನು ಸ್ವಾಗತಿಸಿ ನಿರೂಪಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಅವರಿಂದ ಭಕ್ತಿ ಗೀತೆ ಜರುಗಿತು.ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.