
ನವದೆಹಲಿ,ಏ.೩೦- ದೇಶವಾಸಿಗಳೊಂದಿಗೆ ತಮ್ಮ ಮನದ ಮಾತು ಹಂಚಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರ ಆಕಾಶವಾಣಿಯ ಮಾಸಿಕ ಕಾರ್ಯಕ್ರಮ “ ಮನ್ ಕಿ ಬಾತ್” ನ ೧೦೦ ರ ಸಂಚಿಕೆ ವಿಶ್ವಸಂಸ್ಥೆ ಸೇರಿದಂತೆ ದೇಶ-ವಿದೇಶಗಳಲ್ಲಿ ಏಕಕಾಲಕ್ಕೆ ಪ್ರಸಾರವಾಗುವ ಮೂಲಕ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿದೆ.
ಶತಕದ ಸಂಭ್ರಮಕ್ಕೆ ಮತ್ತಷ್ಟು ಕಳೆಗಟ್ಟಲು ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ೧೦೦ರ ಸಂಚಿಕೆಯ ಪ್ರಸಾರಕ್ಕೆ ಬಿಜೆಪಿಯ ರಾಜ್ಯಮಟ್ಟದ ಕಚೇರಿಯಿಂದ ಬೂತ್ ಮಟ್ಟದ ಕಚೇರಿ ವರೆಗೂ ರೇಡಿಯೋ ಭಾಷಣದ ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ.ಈ ಮೂಲಕ ನೂರರ ಸಂಭ್ರಮವನ್ನು ಮೆಲುಕು ಹಾಕಲಾಯಿತು.
ಈ ಕ್ಷಣಕ್ಕೆ ಆಯಾ ರಾಜ್ಯಗಳಲ್ಲಿ ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳು ಮುಖ್ಯಮಂತ್ರಿಗಳು, ಸಚಿವರು, ಸಂಸದರೂ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಳ್ಳುವ ಮೂಲಕ ಮನ್ ಕಿ ಬಾತ್ ೧೦೦ರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ರೇಡಿಯೊ ಮಾಸಿಕ ಕಾರ್ಯಕ್ರಮದ ಪ್ರಯಾಣವನ್ನು “ನಿಜಕ್ಕೂ ವಿಶೇಷ”ವಾಗಿಸಿದ್ದಾರೆ.
ರಾಜ್ಯವಿಧಾನಸಭೆ ಚುನಾವಣಾ ಪ್ರಚಾರದಲ್ಲಿರುವ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ದಾವಣಗೆರೆಯಲ್ಲಿ, ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವವರಾದ ಧರ್ಮೇಂದ್ರ ಪ್ರಧಾನ್, ರಾಜೀವ್ ಚಂದ್ರಶೇಖರ್ ಸೇರಿದಂತೆ ಮತ್ತಿತರರು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮನ್ ಕಿ ಬಾತ್ ಆಲಿಸಿದರು.
ಪ್ರತಿ ಆವೃತ್ತಿ ವಿಶೇಷ: ಪಿಎಂ
ಮನ್ ಕಿ ಬಾತ್ ೧೦೦ರ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಮನ್ ಕಿ ಬಾತ್ ಲಕ್ಷಾಂತರ ಭಾರತೀಯರ ಮನದ ಮಾತು ಇದೆ, ಆರಂಭವಾಗಿ ಇಷ್ಟು ವರ್ಷಗಳಾಗಿವೆ ಎಂದು ನನಗೆ ನಂಬಲಾಗುತ್ತಿಲ್ಲ. ಪ್ರತಿ ಸಂಚಿಕೆಯೂ ವಿಶೇಷ ಎಂದು ಹೇಳಿದ್ದಾರೆ.
ಮನ್ ಕಿ ಬಾತ್’ ಕೋಟ್ಯಂತರ ಭಾರತೀಯರ ಮನದ ಮಾತಾಗಿ ಪ್ರತಿಬಿಂಬವಾಗಿದೆ ಜೊತೆಗೆ ಭಾವನೆಗಳ ಅಭಿವ್ಯಕ್ತಿಯಾಗಿದೆ.
“ಮನ್ ಕಿ ಬಾತ್ ಹಲವಾರು ಜನ ಚಳುವಳಿಗಳನ್ನು ಹುಟ್ಟುಹಾಕುವಲ್ಲಿ ಮುಂಚೂಣಿಯಲ್ಲಿದೆ, ಅದರಲ್ಲಿಯೂ ಅದು ’ಹರ್ ಘರ್ ತಿರಂಗ’ , ಸಚ್ಚ ಭಾರತ, ಅಥವಾ ’ಕ್ಯಾಚ್ ದಿ ರೈನ್’ ಸೇರಿದಂತೆ ಅನೇಕ ಮನ್ ಕಿ ಬಾತ್ ಸಾಮೂಹಿಕ ಚಳುವಳಿಗಳಿಗೆ ದಾರಿ ಮಾಡಿಕೊಟ್ಟಿದೆ ಎಂದಿದ್ದಾರೆ.
ಜನರೊಂದಿಗೆ ಸಂಪರ್ಕ ಸಾಧಿಸಲು ಅವರಿಗೆ ಪರಿಹಾರ ನೀಡುವ ಕಾರ್ಯಕ್ರಮ ಮಾತ್ರವಲ್ಲ ಬದಲಾಗಿ ಆಧ್ಯಾತ್ಮಿಕ ಪ್ರಯಾಣ ಜೊತೆಗೆ ’ಮನ್ ಕಿ ಬಾತ್’ ದೇಶವಾಸಿಗಳ ಗುಣಗಳನ್ನು ಆರಾಧಿಸುವ ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೇಟಿ ಬಚಾವೋ, ಬೇಟಿ ಪಢಾವೋ’ ಅಭಿಯಾನ ಹರಿಯಾಣದಿಂದಲೇ ಆರಂಭಿಸಿದ್ದೆ. ಮಗಳೊಂದಿಗೆ ‘ಸೆಲ್ಫಿ ಅಭಿಯಾನ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದು ಸಂಚಿಕೆಯಲ್ಲಿ ಪ್ರಸ್ತಾಪಿಸಿದ್ದೆ. ಬಳಿಕ ’ಸೆಲ್ಫಿ ವಿತ್ ಡಾಟರ್’ ಅಭಿಯಾನ ಜಾಗತಿಕವಾಯಿತು. ಈ ಅಭಿಯಾನದ ಉದ್ದೇಶ ಒಬ್ಬರ ಜೀವನದಲ್ಲಿ ಮಗಳ ಪ್ರಾಮುಖ್ಯತೆಯನ್ನು ಜನರಿಗೆ ಅರ್ಥಮಾಡಿಕೊಡುವುದಾಗಿತ್ತು ಎಂದು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಸ್ವಚ್ಛ ಭಾರತ್, ಖಾದಿ, ಆಜಾದಿ ಕಾ ಅಮೃತ್ ಮಹೋತ್ಸವ ಸಾರ್ವಜನಿಕ ಆಂದೋಲನವಾಯಿತು.ಇದು ಹೆಮ್ಮೆಯ ಸಂಗತಿ ಎಂದು ಅವರು ನೂರರ ಸಂಚಿಕೆಯನ್ನು ಮೆಲುಕು ಹಾಕಿಕೊಂಡಿದ್ದಾರೆ.
ಮನ್ ಕಿ ಬಾತ್ ಮಹಿಳಾ ಸಬಲೀಕರಣದ ವಿವಿಧ ಕಥೆಗಳನ್ನು ಒಳಗೊಂಡಿದೆ, ಉದಾಹರಣೆಗೆ ಛತ್ತೀಸ್‌ಗಢದ ದಿಯೋರಾ ಗ್ರಾಮದ ಮಹಿಳೆಯರು, ತಮಿಳುನಾಡಿನ ಬುಡಕಟ್ಟು ಮಹಿಳೆಯರು ಟೆರಾಕೋಟಾ ಕಪ್‌ಗಳನ್ನು ತಯಾರಿಸುತ್ತಾರೆ ಮತ್ತು ವೆಲ್ಲೂರ್ ಸರೋವರ ಪುನರುಜ್ಜೀವನಗೊಳಿಸುವಲ್ಲಿ ಮಹಿಳೆಯ ಪಾತ್ರ ಹಿರಿದು ಎಂದು ಹೇಳಿದ್ದಾರೆ.
ಮನ್ ಕಿ ಬಾತ್ ನಲ್ಲಿ ವಿವಿಧ ಕ್ಷೇತ್ರಗಳಾದ್ಯಂತ ಪ್ರತಿಭಾವಂತ ವ್ಯಕ್ತಿಗಳ ಕಥೆಗಳನ್ನು ಜನರ ಮುಂದಿಡಲಾಗಿದೆ. ಆತ್ಮನಿರ್ಭರ್ ಭಾರತವನ್ನು ಉತ್ತೇಜಿಸುವುದರಿಂದ ಮೇಕ್ ಇನ್ ಇಂಡಿಯಾ ಮತ್ತು ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳವರೆಗೆ. ನಮ್ಮ ಆಟಿಕೆ ಉದ್ಯಮ ಮರುಸ್ಥಾಪಿಸುವ ಉದ್ದೇಶವನ್ನು ಮನ್ ಕಿ ಬಾತ್‌ನೊಂದಿಗೆ ಪ್ರಾರಂಭವಾಯಿತು ಎಂದು ಅವರು ಹೇಳಿದ್ದಾರೆ.
’ಹರ್ ಘರ್ ತಿರಂಗಾ’ ಅಥವಾ ’ಕ್ಯಾಚ್ ದಿ ರೈನ್’ ಆಗಿರಬಹುದು, ಮನ್ ಕಿ ಬಾತ್ ಹಲವಾರು ಸಾಮೂಹಿಕ ಚಳುವಳಿ ಹುಟ್ಟುಹಾಕಿದೆ. ಮನ್ ಕಿ ಬಾತ್ ಸಾಮೂಹಿಕ ಚಳುವಳಿಗಳನ್ನು ವೇಗಗೊಳಿಸಲು ಅನುವು ಮಾಡಿಕೊಟ್ಟಿದೆ ಎಂದು ಅವರು ತಿಳಿಸಿದ್ದಾರೆ.
೨೦೧೪ರಲ್ಲಿ ವಿಜಯ ದಶಮಿಯಂದು ಆರಂಭ:
ಮನ್ ಕಿ ಬಾತ್ ಅನ್ನು ೨೦೧೪ರ ಅಕ್ಟೋಬರ್ ೩ ರಂದು ವಿಜಯ ದಶಮಿ ದಿನ ಮೊದಲ ಬಾರಿಗೆ ಪ್ರಸಾರ ಮಾಡಲಾಯಿತು, ಯಪಿಎ ಸರ್ಕಾರ ೧೦ ವರ್ಷಗಳ ಆಡಳಿತದ ನಂತರ ಬಿಜೆಪಿ ಅಧಿಕಾರಕ್ಕೆ ಬಂದ ಮೊದಲ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಂದಿಗೆ ಅಭಿಪ್ರಾಯ ಹಂಚಿಕೊಳ್ಳಲು ಆರಂಭಿಸಿದ ಅಕಾಶವಾಣಿಯ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್ ಈಗ ೧೦೦ರ ಸಂಭ್ರಮ.
ವಿಶ್ವಸಂಸ್ಥೆಯಲ್ಲಿ ಪ್ರಸಾರ’
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ೧೦೦ ಸಂಚಿಕೆಯನ್ನು ಇದೇ ಮೊಟ್ಟ ಮೊದಲ ಬಾರಿಗೆ ನ್ಯೂಯಾರ್ಕ್‌ನಲ್ಲರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪ್ರಸಾರವಾಗುವ ಮೂಲಕ ದಾಖಲೆ ಬರೆದಿದೆ.
ಇದರ ಜೊತೆಗೆ ಲಂಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಮನ್ ಕಿ ಬಾತ್‌ನ ೧೦೦ ನೇ ಸಂಚಿಕೆಯ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಭಾಗಿಯಾಗಿದ್ದರು,
ಅಮೇರಿಕಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಡಾ. ಜೈಶಂಕರ್ ಅವರು ಅಲ್ಲಿನ ಭಾರತೀಯ ಸಮುದಾಯದೊಂದಿಗೆ ಮನ್ ಕಿ ಬಾತ್ ಆಲಿಸಿದರು.
ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಪ್ರತಿಕ್ರಿಯೆ ನೀಡಿ, ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಭಾರತದ ಪ್ರಯತ್ನಗಳಿಗೆ ಪ್ರಮುಖವಾದ ವಿಷಯಗಳ ಮೇಲೆ ಸುಸ್ಥಿರ ಪ್ರಗತಿ ಉತ್ತೇಜಿಸುವ “ಸ್ಫೂರ್ತಿದಾಯಕ ವೇದಿಕೆ” ಆಗಿ ರೂಪಾಂತರಗೊಂಡಿದೆ ಎಂದು ಹೇಳಿದೆ.