ಮನಗೂಳಿಯಲ್ಲಿ ವಾಜಪೇಯವರ ಜನ್ಮ ದಿನಾಚರಣೆ

ಮನಗೂಳಿ, ಡಿ.27-ಪಟ್ಟಣದಲ್ಲಿ ಸೋಮೇಶ್ವರ ಭಜನಾ ಮಂಟಪದಲ್ಲಿ ಮಾಜಿ ಪ್ರಧಾನಿ ಭಾರತರತ್ನ, ರಾಷ್ಟ್ರೀಯ ಮುತ್ಸದ್ದಿ, ಅಜಾತ ಶತೃ ಅಟಲ್‍ಬಿಹಾರಿ ವಾಜಪೇಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನ್ಮ ದಿನೋತ್ಸವ ಸರಳ ರೀತಿಯಲ್ಲಿ ಆಚರಿಸಲಾಯಿತು.
ಊರಿನ ಹಿರಿಯರಾದ ಅರವಿಂದ ಕಟಾವಿ ಅವರು ಮಾತನಾಡಿ ಭಾರತ ಕಂಡ ಶ್ರೇಷ್ಠ ರಾಜಕಾರಣಿ ತಮ್ಮ ಜೀವನವನ್ನೇ ಭಾರತದ ಜನರ ಸೇವೆಗಾಗಿ ಮೀಸಲಿಟ್ಟು ಅಪ್ರತೀಮ ದೇಶಪ್ರೇಮಿ, ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಂಡು ಅಜಾತ ಶತೃ ಎಂದು ಹೆಸರಾಗಿದ್ದಾರೆ. ಅವರ ಆದರ್ಶ ಗುಣಗಳನ್ನು ಯುವಜನತೆ ಅಳವಡಿಸಿಕೊಂಡು ದೇಶ ಸೇವೆ ಮಾಡಲು ಮುಂದಾಗಬೇಕು ಎಂದರು.
ಬಿಜೆಪಿ ಮುಖಂಡರಾದ ರಾಮು ಲೇಸಪ್ಪಗೋಳ, ಭಾರತರತ್ನ ರಾಜಕೀಯ ಮುತ್ಸದ್ದಿ, ರಾಜಕೀಯ ಧೃವತಾರೆ, ಮಾತಿನಲ್ಲಿ ಚತುರನಾಗಿ ರಾಜಕೀಯ ದಾರಿಯ ದೀಪವಾಗಿ ಶಿಸ್ತಿನ ಸಿಪಾಯಿಯಾಗಿ ಬಾಲ್ಯದ ಜೀವನದಲ್ಲಿಯೇ ದೇಶಸೇವೆ ಮಾಡಲು ಮುಂದಾದವರು. ಕವಿ ಹೃದಯ ಮನಸ್ಸಿನ ಅಧ್ಯಾತ್ಮಕ ಚಿಂತಕರು, ಸಾಹಿತ್ಯಿಗಳು, ಪ್ರಮಾಣಿಕ, ನೇರನುಡಿ, ದಿಟ್ಟ ಹೆಜ್ಜೆ, ರಾಜಕಾರಣದಲ್ಲಿ ಹಲವಾರು ಸಮಸ್ಯೆಗಳು ಬಂದರು ಕೂಡ ಮಾತಿನ ಚಾತುರ್ಯದಿಂದ ಶಾಂತ ರೀತಿಯಿಂದ ಬಗೆಹರಿಸಿ ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಂಡು ಜೀವನ ಪರ್ಯಂತ ಭಾರತಾಂಬೆಯ ಸೇವೆ ಮಾಡುತ್ತ ಅಪ್ರತಿಮ ದೇಶಭಕ್ತನಾಗಿ ಭಾರತೀಯರ ಹೃದಯದಲ್ಲಿ ಮನೆಮಾತಾಗಿರುವರು. ಇಂದಿನ ಯುವಜನತೆ ಅವರ ಆದರ್ಶದ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಬಿಜೆಪಿ ಯುವ ಮುಖಂಡನಾದ ಲಕ್ಷ್ಮಣ ಹಡಪದ ಅವರು ಕಲ್ಲರಳಿ ಹೂವಾಗಿ, ಶಿಕ್ಷಕನ ಮಗನಾಗಿ ಕಸ್ತೂರಿ ಪರಿಮಳದಂತೆ ಹೃದಯವಂತ ಕವಿಯಾಗಿ ಹಿಂದೂಸ್ತಾನ ಎಂದು ಮರೆಯದ ಭಾರತರತ್ನ ನೀನಾದೆ ಅಟಲ್‍ಜಿ ಅಂತ ಶಿವಾಜಿ ಮೋರೆ ಅವರ ಬರೆದ ಸ್ವರಚಿತ ಗೀತೆಯಲ್ಲಿರುವ ಈ ನುಡಿಯನ್ನು ಹೇಳುತ್ತ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ದಿನೇಶ ಗೊಂಗಡಿ, ಲಕ್ಷ್ಮಣ ಹಜೇರಿ, ಹರಿಸಿಂಗ್ ರಜಪೂತ, ಶಿವಾಜಿ ಮೋರೆ, ಉಮೇಶ ನಾವಿ, ಬಸಯ್ಯ ನಂದಿಕೋಲಮಠ, ಪ್ರಕಾಶ ಮನಗೂಳಿ, ಅಶೋಕ ಹಾವಣ್ಣವರ, ಮಾಳು ನಾಗರಾಳ, ಅಶೋಕ ಮಡಿವಾಳರ, ರಾಜು ಮುತ್ತಪ್ಪನವರ ಮುಂತಾದವರು ಉಪಸ್ಥಿತರಿದ್ದರು. ರವಿ ಹಾವಣ್ಣವರ ಸ್ವಾಗತಿಸಿ, ವಂದಿಸಿದರು.