ಮಧ್ಯ ಕರ್ನಾಟಕದ ಶಕ್ತಿಯಾಗಿದ್ದಕೆಂಗೋ ಹನುಮಂತಪ್ಪ

ದಾವಣಗೆರೆ.ಮೇ.೩೦; ನೇರ ನಿಷ್ಠುರವಾದಿ, ಸಾಮಾಜಿಕ ಕಳಕಳಿಯುಳ್ಳ, ಸರ್ವ ಸಮಾಜ ಪ್ರೀತಿಪಾತ್ರರಾಗಿದ್ದ ಕೆಂಗೋಹನುಮಂತಪ್ಪ ಇನ್ನಿಲ್ಲದ ಸುದ್ದಿ ಕೇಳಿ ಬಹಳ ಬೇಸರವೆನಿಸುತ್ತಿದೆ. ದಾವಣಗೆರೆ ತಾಲ್ಲೂಕಿನ ಚಿಕ್ಕಬೂದಿಹಾಳ್ ಗ್ರಾಮದ ದೊಡ್ಡ ದ್ಯಾಮಪ್ಪ ಹಾಗೂ ಭೀಮಮ್ಮ ಇವರ ಪುತ್ರ ಕೆಂಗೋಹನುಮಂತಪ್ಪ ಸಾಮಾನ್ಯ ಕುಟುಂಬದ ಬಂದವರು. ಇವರು ದಾವಣಗೆರೆಗೆ ಹೊಂದಿಕೊಂಡಿರುವ ಹಳ್ಳಿಗಾಡಿನ ಸೊಬಗಿನಲ್ಲಿ ಬೆಳೆದು ಇಂದು ಸರ್ವ ಸಮಾಜದ, ತಳಸಮುದಾಯ, ಕುರುಬ ಸಮಾಜದ ಪ್ರೀತಿ ಪಾತ್ರರಾಗಿದ್ದರು. ಸ್ವಾತಂತ್ರ‍್ಯ ಹೋರಾಟದ ಮನೋಭಾವದಲ್ಲಿ ಬೆಳೆದ ಹನುಮಂತಪ್ಪ ನಿಷ್ಠುರವಾದಿಯಾಗಿದ್ದರು. 1962ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಪದವೀಧರರಾಗಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸರ್ಕಾರಿ ನೌಕರರಾಗಿದ್ದರು. ಆದರೆ ಸಮಾಜ ಕಳಕಳಿಯುಳ್ಳ ಇವರು ಸರ್ಕಾರಿ ಕೆಲಸ ತ್ಯಜಿಸಿ ಜನಸೇವೆಗೆ ಮುಂದಾದರು. ಜನಸಂಘ ಪರಿವಾರದಲ್ಲಿ ಕಾರ್ಯನಿರ್ವಹಿಸಿ, ಬಿ.ಬಿ. ಶಿವಪ್ಪ, ಎ.ಕೆ. ಸುಬ್ಬಯ್ಯ, ಎಸ್. ಮಲ್ಲಿಕಾರ್ಜುನಯ್ಯ, ಸಂಜೀವಶೆಟ್ರು, ಚನ್ನಯ್ಯ ಒಡೆಯರ್, ಕೆ. ಮಲ್ಲಪ್ಪ, ಡಾ.ವೈ.ನಾಗಪ್ಪ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಹೆಚ್. ವಿಶ್ವನಾಥ್, ಹೆಚ್.ಎಂ. ರೇವಣ್ಣ ಇವರುಗಳ ಆಪ್ತ ಒಡನಾಡಿಗಳಾಗಿದ್ದರು. ಟಿ.ಎ.ಪಿ.ಎಂ.ಸಿ., ಎ.ಪಿ.ಎಂ.ಸಿ. ಹಾಗೂ ಕಿಸಾನ್ ಮಜ್ದೂರ್ ಕಾಂಗ್ರೆಸ್ ಹಾಗೂ ಜಿಲ್ಲಾ ಕುರುಬಸಮಾಜದಲ್ಲಿ ಅವಿರತ ಸಾಮಾಜಿಕ ಕಾರ್ಯ ಸಂಘಟನೆಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಜನಸಂಘದಿಂದ ಶಾಸಕ ಸ್ಥಾನಕ್ಕೆ ಚುನಾವಣೆಗೂ ಕೂಡ ಸ್ಪರ್ಧಿಸಿದ್ದರು. ತನದನಂತರ ಜನತಾಪರಿವಾರ ಹಾಗೂ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. 2013ರಲ್ಲಿದೇಶ ಕಂಡಂತಹ ಕುರುಬರ ಜಾಗೃತಿ ಸಮಾವೇಶ, ಕರ್ನಾಟಕ ಪ್ರದೇಶ ಕುರುಬ ಸಂಘದೊಂದಿಗೆ ಅಭೂತಪೂರ್ವ ರಾಜ್ಯಮಟ್ಟದ ಸಮಾವೇಶ ನಡೆಸಿ, ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಗಾದಿಗೆ ಅಡಿಪಾಯವಾಗಲು ಕಾರಣವಾದ ಸಮಾವೇಶ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಹಲವಾರು ಸಂಘಟನೆಗಳಲ್ಲಿ ಭಾಗವಹಿಸಿ ಯಶಸ್ವಿಯೂ ಆಗಿದ್ದರು. ಕೇವಲ ಕುರುಬ ಸಮಾಜಕ್ಕೆ ಸೀಮಿತವಾಗದೆ ಎಲ್ಲ ಸಮಾಜ ಬಾಂಧವರ ಒಡನಾಡಿಯಾಗಿ ಎಲ್ಲರ ಪ್ರೀತಿ ಪಾತ್ರರಾಗಿದ್ದರು. ದಾವಣಗೆರೆ ಜಿಲ್ಲಾ ಕುರುಬಸಮಾಜ ಸಂಘಟನೆಯಲ್ಲಿ ಮಾಜಿ ಶಾಸಕ ಕೆ.ಮಲ್ಲಪ್ಪ, ಕೆಂಗೋ ಹನುಮಂತಪ್ಪನವರು ಜೋಡೆತ್ತಿನಂತೆ ತೊಡಗಿಸಿಕೊಂಡಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಹಿಂದ ಸಂಘಟನೆ ಪ್ರಾರಂಭಿಸಿದಾಗ ಕೆಂಗೋಹನುಮಂತಪ್ಪನವರು ಮಧ್ಯ ಕರ್ನಾಟಕದಲ್ಲಿ ಎಲ್ಲ ಸಮಾಜದವರೊಡನೆ ಸೇರಿ ಅಹಿಂದ ಸಂಘಟನೆಯಲ್ಲಿ ಸಂಘಟಿಸಿ ಯಶಸ್ವಿಯಾಗಿದ್ದರು. ಎಲ್ಲಿ ಅನ್ಯಾಯ ನಡೆಯುತ್ತಿದೆ ಎಂದರೆ ಎಂತಹ ಅಧಿಕಾರಿಗಳಿದ್ದರೂ ಕೂಡ ನ್ಯಾಯ ದೊರಕಿಸುವಲ್ಲಿ ಯಶಸ್ವಿಯಾಗುತ್ತಿದ್ದರು.ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಹಾಗೂ ವಿಶ್ವಭಾರತಿ ವಿದ್ಯಾಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಧ್ಯ ಕರ್ನಾಟಕದಲ್ಲಿ ಕೆಂಗೋಹನುಮಂತಪ್ಪ ಒಂದು ಶಕ್ತಿಯಾಗಿ ಬೆಳೆದಿದ್ದರು. ಸಾಕಷ್ಟು ಯುವ ಪಡೆಗಳೊಂದಿಗೆ ಕುರುಬ ಸಮಾಜದ ಸಂಘಟನೆಯ ನೇತೃತ್ವ ವಹಿಸಿದ್ದರು. ಎಂತಹ ಸಮಯಬಂದರೂ ಅಧಿಕಾರ, ಅಂತಸ್ಥಿಗೆ ಆಸೆ ಪಡದ ಸಾಮಾನ್ಯ ವ್ಯಕ್ತಿಯಾಗಿ ದೊಡ್ಡ ಶಕ್ತಿಯಾಗಿ ಬೆಳೆದಿದ್ದರು. ಇಂದು ಅವರ ಅಗಲಿಕೆಯಿಂದ ಸಮಾಜಕ್ಕೆ ಮತ್ತು ಕುರುಬ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.-ಬಿ. ಚನ್ನವೀರಯ್ಯ, ದಾವಣಗೆರೆ.