ಮಧ್ಯಾಹ್ನದ ಬಿಸಿಯೂಟ ಯೋಜನೆಯ 7,63,90,000ರೂ.ಗಳ ದುರ್ಬಳಕೆ: ತನಿಖೆಗೆ ಆಗ್ರಹ

ಕಲಬುರಗಿ,ಜು.22: ಮಧ್ಯಾಹ್ನದ ಉಪಹಾರ ಯೋಜನೆಯಡಿ ಕಳೆದ 2021ರ ಮೇ ಮತ್ತು ಜೂನ್ ಅವಧಿಯಲ್ಲಿ 1ರಿಂದ 8ನೇ ತರಗತಿಯ ಮಕ್ಕಳಿಗೆ 50 ದಿನಗಳ ಬೇಸಿಗೆ ರಜೆಗೆ ಅವಧಿಗೆ ಅಡಿಗೆ ತಯಾರಿಕೆ ವೆಚದ ಮೊತ್ತವನ್ನು ಸರ್ಕಾರದಿಂದ ಒಟ್ಟು 7,63,90,000ರೂ.ಗಳನ್ನು ಬಿಡುಗಡೆ ಮಾಡಿದ್ದು, ಅದನ್ನು ಶಾಲಾ ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮಾಡದೇ ದುರುಪಯೋಗ ಮಾಡಿಕೊಂಡಿದ್ದು, ಆ ಕುರಿತು ತನಿಖೆ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಎಸ್. ಸಾರವಾಡ್ ಅವರು ಒತ್ತಾಯಿಸಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಮಹತ್ವದ ಯೋಜನೆಯಲ್ಲಿ ಒಂದಾದ ಮಧ್ಯಾಹ್ನದ ಉಪಹಾರ ಯೋಜನೆಗೆ ಸರ್ಕಾರವು ಕೋಟ್ಯಾಂತರ ರೂ.ಗಳನ್ನು ಬಿಡುಗಡೆ ಮಾಡುತ್ತಿದೆ. ಆ ಹಣವು ಈಗ ದುರ್ಬಳಕೆಯಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಒಟ್ಟು ಒಂದರಿಂದ 8ನೇ ತರಗತಿಯವರೆಗೆ 2,58,864 ವಿದ್ಯಾರ್ಥಿಗಳಿದ್ದಾರೆ. ಒಂದರಿಂದ 5ನೇ ತರಗತಿಯ ಪ್ರತಿ ಫಲಾನುಭವಿ ವಿದ್ಯಾರ್ಥಿಗೆ ಪ್ರತಿ ದಿನ ತಲಾ 4.97 ಪೈಸೆಯಂತೆ 50 ದಿನಕ್ಕೆ 248 ರೂ.ಗಳಷ್ಟು ಒಟ್ಟು 1,60,546 ವಿದ್ಯಾರ್ಥಿಗಳಿಗೆ 3,98,15,408ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. 6ರಿಂದ 8ನೇ ತರಗತಿಯವರೆಗೆ 98,318 ವಿದ್ಯಾರ್ಥಿಗಳಿದ್ದು, ಪ್ರತಿ ದಿನ ಒಂದು ವಿದ್ಯಾರ್ಥಿಗೆ 7.45ರೂ.ಗಳಂತೆ 50 ದಿನಗಳಿಗೆ 372ರೂ.ಗಳಂತೆ ಒಟ್ಟು 3,65,74,296ರೂ.ಗಳನ್ನು ಫಲಾನುಭವಿ ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮುಖಾಂತರ ಹಣ ಬಿಡುಗಡೆಗೊಳಿಸಿದೆ. ಆದಾಗ್ಯೂ, ಕಳೆದ ಒಂದು ವರ್ಷದಿಂದ ಇಲ್ಲಿಯವರೆಗೂ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡದೇ ಸಂಬಂಧಪಟ್ಟ ಅಕ್ಷರ ದಾಸೋಹದ ಅಧಿಕಾರಿಗಳ ಸಹಾಯದಿಂದ ಕೆಲ ಮುಖ್ಯೋಪಾಧ್ಯಾಯರು ಹಣವನ್ನು ಡ್ರಾ ಮಾಡುವ ಮೂಲಕ ದುರ್ಬಳಕೆ ಮಾಡಿದ್ದಾರೆ ಎಂದು ಅವರು ದೂರಿದರು.
ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಕೇಳಿದರೆ ಮಕ್ಕಳು ಬ್ಯಾಂಕ್ ಖಾತೆ ಹೊಂದಿರುವುದಿಲ್ಲವೆಂದು ಹಾರಿಕೆ ಉತ್ತರ ನೀಡುತ್ತಾರೆ. ಕಳೆದ ಮಾರ್ಚ್ 31ರೊಳಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮುಖ್ಯ ಶಿಕ್ಷಕರು ಉಳಿದ ಅರ್ಹ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಹಣ ಜಮೆ ಮಾಡಿ ವರದಿಯನ್ನು ಎಸ್‍ಡಿಎಂಸಿಯವರ ದೃಢೀಕರಣದೊಂದಿಗೆ ಆಯಾ ತಾಲ್ಲೂಕಿನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಿಗೆ ಪರಿಶೀಲನೆಗೆ ಸೂಚಿಸಿದ್ದಾರೆ. ಹೀಗೆ ಸಲ್ಲಿಸಿದ ವರದಿಯನ್ನು ಪರಿಶೀಲಿಸಿ 2021ರ ಮೇ ಮತ್ತು ಜೂನ್ ಮಾಹೆಯಲ್ಲಿ ದಾಖಲಾತಿ ಹೊಂದಿರುವ 1ರಿಂದ 8ನೇ ತರಗತಿ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಪರಿವರ್ತನಾ ವೆಚ್ಚ ಜಮೆಯಾಗಿರುವ ಕುರಿತು ಖಾತ್ರಿಪಡಿಸಿಕೊಂಡು ಜಿಲ್ಲಾ ಪಂಚಾಯಿತಿ ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗಳಿಗೆ 2022ರ ಏಪ್ರಿಲ್ 2ರೊಳಗೆ ವರದಿ ಮಾಡಲು ಸೂಚಿಸಿದ್ದಾರೆ. ಆದಾಗ್ಯೂ, ಇಲ್ಲಿಯವರೆಗೂ ಸಹ ಕೆಲ ಅರ್ಹ ಫಲಾನುಭವಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡದೇ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಅರ್ಹ ಫಲಾನುಭವಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತ್ತಿಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಶಶಿ ದಸ್ತಾಪೂರ್, ಶಿವಕುಮಾರ್, ಕಿರಣ್ ಮುಂತಾದವರು ಉಪಸ್ಥಿತರಿದ್ದರು.