ಮಧ್ಯವರ್ತಿಗಳೊಂದಿಗೆ ಸಂಪರ್ಕ: ಕಾರ್ಮಿಕ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕಲಬುರಗಿ :ಜೂ.05:ಮಧ್ಯವರ್ತಿಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಕಟ್ಟಡ ಕಾರ್ಮಿಕರ ಸಂಘವನ್ನು ನಿರ್ಲಕ್ಷಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನವಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಭೀಮರಾಯ್ ಎಂ. ಕಂದಳ್ಳಿ ಅವರು ಒತ್ತಾಯಿಸಿದರು.
ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಸುಮಾರು ಸಾವಿರಕ್ಕೂ ಅಧಿಕ ಸದಸ್ಯತ್ವ ಹೊಂದಿರುವ ಸಂಘದ ಗಮನಕ್ಕೆ ತರದೇ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಳೆದ 3ರಂದು ತಮಗೆ ಬೇಕಾದವರನ್ನು ಕರೆಸಿಕೊಂಡು ಸಭೆ ಮಾಡಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಯಿಂದ ಗೊತ್ತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಮಿಕ ಇಲಾಖೆಯೊಂದಿಗೆ ಸಂಲಗ್ನತೆ ಹೊಂದಿರುವ ಸಂಘಕ್ಕೆ ಸಭೆಯ ನೋಟಿಸ್ ಸಹ ನೀಡಿಲ್ಲ. ಈ ಕುರಿತು ಅಧಿಕಾರಿಯನ್ನು ಕೇಳಿದರೆ ನನಗೆ ಸಭೆಯ ಕುರಿತು ಮಾಹಿತಿಯೇ ಇಲ್ಲ ಎಂದು ಬೇಜವಾಬ್ದಾರಿಯಿಂದ ಹೇಳುತ್ತಾರೆ. ಹೀಗಾಗಿ ಅಧಿಕಾರದ ದುರ್ಬಳಕೆ ಎದ್ದು ಕಾಣುತ್ತಿದೆ ಎಂದು ಅವರು ಆರೋಪಿಸಿದರು.
ಕೂಡಲೇ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ಇನ್ನೊಮ್ಮೆ ಸಭೆ ಮಾಡಿ ಕಟ್ಟಡ ಕಾರ್ಮಿಕರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು. ಮಧ್ಯವರ್ತಿಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಅಧಿಕಾರ ನಡೆಸುವ ಕೆಲ ಸಿಬ್ಬಂದಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಮರೆಪ್ಪ, ಶರಣು ಬಳಿಚಕ್ರ, ದೇವಿಂದ್ರ ಬಳಿಚಕ್ರ ಮುಂತಾದವರು ಉಪಸ್ಥಿತರಿದ್ದರು.