ಮಧ್ಯರಾತ್ರಿ ಸುರಿದ ಭಾರೀ ಮಳೆ : ಬಹುತೇಕ ರಸ್ತೆ, ತೆಗ್ಗು, ವಸತಿ ಪ್ರದೇಶ ಜಲಾವೃತ – ಜನ ತತ್ತರ

ಸಿಯಾತಲಾಬ್, ಅರಬ್ ಮೊಹಲ್ಲ, ಜಲಾಲ ನಗರ ಮನೆಗಳಿಗೆ ನುಗ್ಗಿದ ನೀರು – ಬಟ್ಟೆ, ಬರೆ, ದವಸ ಧಾನ್ಯ ಕಳೆದುಕೊಂಡ ನಾಗರಿಕರು
ರಾಯಚೂರು.ಸೆ.೦೮- ನಗರದಲ್ಲಿ ನಿನ್ನೆ ಮಧ್ಯರಾತ್ರಿ ಸುರಿದ ಭಾರೀ ಮಳೆಗೆ ಸಿಯಾತಲಾಬ್, ಜಲಾಲ ನಗರ, ಅರಬ್ ಮೊಹಲ್ಲಾದ ಬಡಾವಣೆಗಳು ಸೇರಿದಂತೆ ನಗರದಾದ್ಯಂತ ಇರುವ ತೆಗ್ಗು ಪ್ರದೇಶದ ಜನವಸತಿ ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ, ಬಟ್ಟೆ ಬರೆ ಸೇರಿದಂತೆ ಎಲ್ಲವೂ ನಾಶವಾದ ಘಟನೆಗೆ ಕಾರಣವಾಯಿತು.
ರಾತ್ರಿ ಸುಮಾರು ೧ ಘಂಟೆಯಿಂದ ೨ ಘಂಟೆಗಳ ಕಾಲ ಸುರಿದ ಭಾರೀ ಮಳೆ ನಗರದ ಗುಂಡಿ, ರಸ್ತೆಗಳು ಸೇರಿದಂತೆ ತೆಗ್ಗು ಪ್ರದೇಶದ ಜನವಸತಿಗೆ ಭಾರೀ ಪ್ರಮಾಣದ ನೀರು ನುಗ್ಗಿದ ಪರಿಣಾಮ ಜನ ಕಕ್ಕಾಬಿಕ್ಕಿಯಾದರು. ಬೆಳಗಾಗುವುದರೊಳಗೆ ಮನೆಯಲ್ಲಿ ಸಂಗ್ರಹಿಸಿದ್ದ ಬಟ್ಟೆ, ಬರೆ, ದವಸ, ಧಾನ್ಯ ಹಾಗೂ ಇನ್ನಿತರ ಸಾಮಾಗ್ರಿ ನೀರು ಪಾಲಾಗುವಂತಾಯಿತು. ರಾತ್ರಿಯಿಡೀ ಜನ ಮನೆಯಿಂದ ನೀರು ಎತ್ತಿ ಹಾಕುವುದರಲ್ಲಿಯೇ ಕಾಲ ಕಳೆಯಬೇಕಾಯಿತು. ಒಂದೆಡೆ ಕತ್ತಲು, ಮತ್ತೊಂದೆಡೆ ಮನೆಗೆ ನುಗ್ಗಿ ಬರುತ್ತಿರುವ ಹೊಲಸು ನೀರು ಹಾಗೂ ಸಣ್ಣಪುಟ್ಟ ಜಲಚರಗಳ ಬಾಧೆ ಜನರನ್ನು ಭಾರೀ ತಳಮಳಕ್ಕೆ ಗುರಿಯಾಗುವಂತೆ ಮಾಡಿತ್ತು.
ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ವತಿಯಿಂದ ೮೪ ಲಕ್ಷ ವೆಚ್ಚದಲ್ಲಿ ರಾಜಕಾಲುವೆ ಮತ್ತು ಬಡಾವಣೆ ಚರಂಡಿ ಸ್ವಚ್ಛಗೊಳಿಸಿದ ನಂತರ ತೆಗ್ಗು ಪ್ರದೇಶಗಳಿಗೆ ನೀರು ನುಗ್ಗುವುದಿಲ್ಲ ಎನ್ನುವ ಭರವಸೆ ಈ ಮಳೆ ಸುಳ್ಳಾಗಿಸಿದೆ. ೮೪ ಲಕ್ಷ ರಾಜಕಾಲುವೆ ಮತ್ತು ಚರಂಡಿಗಳ ಸ್ವಚ್ಛತೆ ಬಳಕೆ ನಂತರವೂ ಹಿಂದಿನ ಸ್ಥಿತಿ ಮುಂದುವರೆದಿದೆ.
ನಗರದ ಗುಂಡಿ ತುಂಬಿದ ರಸ್ತೆಗಳಲ್ಲಿ ನೀರು ತುಂಬಿ ಜನ ಸಂಚಾರ ಸಂದರ್ಭದಲ್ಲಿ ಎದ್ದು, ಬಿದ್ದು ಸಾಗುವುದು ಒಂದೆಡೆಯಾದರೆ, ಮತ್ತೊಂದೆಡೆ ಮೊಣಕಾಳುವರೆಗಿನ ನೀರು ತುಂಬಿದ ಬಡಾವಣೆಗಳಲ್ಲಿ ಜನ ರಾತ್ರಿಯಿಡೀ ಆತಂಕದಲ್ಲಿ ಜೀವನ ನಡೆಸಬೇಕಾಯಿತು. ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಕಂಡ ಮಳೆ ಅವಾಂತರ ನಿನ್ನೆ ತಡರಾತ್ರಿ ಸುರಿದ ಮಳೆಗೆ ನಗರವೂ ಅದೆ ಪರಿಸ್ಥಿತಿಯಿಂದ ತೋಳಲಾಡುವಂತಾಯಿತು. ೨೦೦೯ ರಲ್ಲಿ ಉಂಟಾದ ಜಲಪ್ರಳಯದ ಸಣ್ಣ ಜಲಕ್ ನಿನ್ನೆ ನಗರದಲ್ಲಿ ಕಾಣಬಹುದಾಗಿತ್ತು.
ರಸ್ತೆಯ ಅಕ್ಕಪಕ್ಕದಲ್ಲಿದ್ದ ಕಸ, ಕಡ್ಡಿಯೆಲ್ಲಾ ಮಳೆ ನೀರಿನ ಪ್ರವಾಹಕ್ಕೆ ಜನವಸತಿ ಪ್ರದೇಶದ ಮನೆ ಹೊಕ್ಕು ಜನ ಹೊಲಸಿನಲ್ಲಿ ಕಾಲ ಕಳೆಯುವ ಪರಿಸ್ಥಿತಿಗೆ ಕಾರಣವಾಯಿತು. ತ್ರಿಬಲ್ ಇಂಜಿನ್ ಸರ್ಕಾರದ ಅಧಿಕಾರದಲ್ಲಿ ಹಿಂದುಳಿದ ಮತ್ತು ಮಹಾತ್ವಕಾಂಕ್ಷಿ ಜಿಲ್ಲೆಯ ಜಿಲ್ಲಾ ಕೇಂದ್ರವಾದ ಗ್ರೇಡ್-೧ ನಗರಸಭೆ ಪರಿಸ್ಥಿತಿ ಕಂಡ ಜನ ಇದೇನು ನಗರವೆ ಅಥವಾ ಕುಗ್ರಾಮವೆ ಎಂದು ತಮ್ಮಲ್ಲೆ ತಾವು ಪ್ರಶ್ನಿಸಿಕೊಳ್ಳುವಂತಹ ದಾರುಣ ಕಂಡು ಬಂದಿತು. ಈ ನಗರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದಾರೆಯೆ ಅಥವಾ ಇಲ್ಲವೆ ಎನ್ನುವ ಆಕ್ರೋಶ ಜನರಲ್ಲಿ ಕಂಡು ಬಂದಿತು.
ಪ್ರತಿ ಮಳೆ ಸಂದರ್ಭದಲ್ಲೂ ಇದೇ ರೀತಿ ಮನೆಗಳಿಗೆ ನೀರು ತುಂಬುತ್ತಿದ್ದರೂ, ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸುವ ಪ್ರಯತ್ನ ಯಾರಿಂದಲೂ ನಡೆಯದಿರುವುದು ಜನರ ಆಕ್ರೋಶ ಮುಗಿಲು ಮುಟ್ಟುವಂತೆ ಮಾಡಿತ್ತು. ಸಿಯಾತಲಾಬ್ ಬಡಾವಣೆಯ ಕೆಲ ಭಾಗದಲ್ಲಂತೂ ಜನರು ಮುಂಜಾನೆವರೆಗೂ ಹೊಲಸು ನೀರಿನಲ್ಲಿ ನಿಂತು ಕಾಲ ಕಳೆಯಬೇಕಾಯಿತು. ಸುಖಾಣಿ ಬಡಾವಣೆ, ಅರಬ್ ಮೊಹಲ್ಲಾದ ಅಲಿನಾಯಕ ಬಡಾವಣೆಗಳಲ್ಲಿ ಎಲ್ಲಿ ನೋಡಿದರೂ ನೀರು.
ಸಮರ್ಪಕವಾದ ಚರಂಡಿಗಳ ಕೊರತೆ ಮತ್ತು ರಾಜ ಕಾಲುವೆಗಳಲ್ಲಿ ತುಂಬಿದ ಹೂಳು ಇತ್ಯಾದಿಗಳಿಂದ ಮಳೆ ನೀರು ರಸ್ತೆಗಳ ಉದ್ಧಕ್ಕೂ ಹರಿದು, ಮುಂದೆ ಹೋಗಲು ದಾರಿಯಿಲ್ಲದೆ, ಜನ ವಸತಿ ಪ್ರದೇಶಗಳ ಮನೆಗಳಿಗೆ ನುಗ್ಗಿ ಜನರ ಜೀವನವನ್ನೇ ಅಸ್ತವ್ಯಸ್ತಗೊಳ್ಳುವುದಕ್ಕೆ ಕಾರಣವಾಯಿತು. ಮಕ್ಕಳು, ಮರಿಗಳನ್ನು ಹಿಡಿದುಕೊಂಡು ಬಡಾವಣೆಗಳಿಗೆ ಬಂದ ಶಾಸಕರು, ವಿರೋಧ ಪಕ್ಷದ ಮುಖಂಡರ ಮುಂದೆ ತಮ್ಮ ಗೋಳು ತೋಡಿಕೊಂಡರು.