ಮಧ್ಯಮಾವಧಿ ದೀರ್ಘಾವಧಿ ಸಾಲಗಳ ಸುತ್ತೋಲೆ ಹಿಂಪಡೆಯಲು ಮನವಿ

ಸುಳ್ಯ:೨೦೨೦-೨೧ ನೇ ಸಾಲಿಗೆ ಸಹಕಾರ ಸಂಘಗಳ ಮೂಲಕ ವಿತರಿಸುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಕುಟುಂಬಕ್ಕೆ ೧೦ ಲಕ್ಷ ನಿಗದಿ ಮಾಡಿರುವುದು ಮತ್ತು ೨೦೦೪ ನೇ ಇಸವಿಯಿಂದ ರೈತರ ಕೃಷಿ ಸಾಲಗಳಿಗೆ ಸರಕಾರ ನೀಡಿರುವ ಸಬ್ಸಿಡಿ ಯನ್ನು ಗಣನೆಗೆ ತೆಗೆದುಕೊಂಡು ಕುಟುಂಬಕ್ಕೆ ೪ ಲಕ್ಷ ಬಡ್ಡಿ ಸಹಾಯಧನದ ಮಿತಿ ಎಂದು ನಿಗದಿಪಡಿಸಿ ಸರಕಾರ ಇಲಾಖೆ ಸುತ್ತೋಲೆ ಹೊರಡಿಸಿದೆ.
೨೦೦೪ರಿಂದ ರೈತನ ಪರವಾಗಿ ಪಾವತಿಸಿದ ಬಡ್ಡಿ ಸಹಾಯಧನದ ಲೆಕ್ಕ ತೆಗೆದು ೪ ಲಕ್ಷದ ಮಿತಿ ವಿಧಿಸಿರುವ ಕಾರಣ ಒಮ್ಮೆ ೧೦ ಲಕ್ಷ ಸಾಲ ಪಡೆದ ರೈತ ಪ್ರಾಮಾಣಿಕವಾಗಿ ಸಾಲ ಮರುಪಾವತಿಸಿ ಪುನಹ ಸಾಲ ಪಡೆಯುವಾಗ ಸಬ್ಸಿಡಿ ಸಿಗದೆ ಇರುವ ಕಾರಣ ಹೆಚ್ಚಿನ ಬಡ್ಡಿ ಪಾವತಿಸಬೇಕಾಗಲಿದೆ. ಹಾಗಾಗಿ ಈ ಆದೇಶದಿಂದ ಕೃಷಿಕರಿಗೆ ಸಬ್ಸಿಡಿ ಸಾಲ ಪಡೆಯಲು ಅಸಾಧ್ಯ ಪರಿಸ್ಥಿತಿ ನಿರ್ಮಾಣವಾಗಲಿರುವುದರಿಂದ ರೈತರಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಸರಕಾರ ಹೊರಡಿಸಿ ರುವ ಆದೇಶ ರದ್ದುಪಡಿಸಿ ಹಿಂದಿನಂತೆ ಜಮೀನು ಹೊಂದಿರುವ ಅರ್ಹ ರೈತರಿಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ವಿತರಿಸಲು ಅವಕಾಶ ಮಾಡಿ ಸುತ್ತೋಲೆ ಮಾರ್ಪಾಡು ಮಾಡುವಂತೆ ಸರಕಾರದ ಗಮನ ಸೆಳೆಯಬೇಕು ಎಂದು ಸುಳ್ಯ ಸಿ.ಏ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ ಸುಳ್ಯದ ಶಾಸಕರಾದ ಎಸ್ ಅಂಗಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.