ಮಧು ಬಂಗಾರಪ್ಪಗೆ ಸಚಿವ ಸ್ಥಾನ ನೀಡಲು‌ ಒತ್ತಾಯ

ಶಿವಮೊಗ್ಗ.ಮೇ.೨೫: ರಾಜ್ಯ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಶಿವಮೊಗ್ಗ ಜಿಲ್ಲಾ ಭಾವಸಾರ ಕ್ಷತ್ರಿಯ ಸಮಾಜ ಯುವ ಪರಿಷತ್ ಅಧ್ಯಕ್ಷ ವಿನಯ್ ತಾಂದ್ಲೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕಾಂಗ್ರೆಸ್ ಪಕ್ಷ ಮಲೆನಾಡಿನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಮಧು ಬಂಗಾರಪ್ಪ ಅವರ ಶ್ರಮ ಸಾಕಷ್ಟಿದೆ. ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ, ರಾಜ್ಯಾದ್ಯಂತ ಹಿಂದುಳಿದ ವರ್ಗದ ಜನರನ್ನು ಮಧು ಬಂಗಾರಪ್ಪ ಸಂಘಟಿಸಿದ್ದಾರೆ. ಅದೇ ರೀತಿ ಈ ಬಾರಿ ಹಿಂದುಳಿದ ವರ್ಗದ ಜನರು ಸಹ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಹಾಗಾಗಿ ಅವರಿಗೆ ಸಚಿವ ಸ್ಥಾನ ನೀಡುವುದು ಹೆಚ್ಚು ಸೂಕ್ತ’ ಎಂದು ವಿನಯ್ ಅಭಿಪ್ರಾಯಪಟ್ಟಿದ್ದಾರೆ.ಸೊರಬ ಇತಿಹಾಸದಲ್ಲೇ ಈ ಬಾರಿ ಮಧು ಬಂಗಾರಪ್ಪ ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸಹಜವಾಗಿ ಕ್ಷೇತ್ರದ ಜನರು ಸಹ ಮಧು ಬಂಗಾರಪ್ಪ ಅವರು ಸಚಿವರಾಗುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಅವರ ನಿರೀಕ್ಷೆಯನ್ನು ಸರ್ಕಾರ ಹುಸಿ ಮಾಡಬಾರದು. ಅಲ್ಲದೇ ಕಾಂಗ್ರೆಸ್ ಪಕ್ಷ ಬಹುಮತ ಗಳಿಸುವಲ್ಲಿ ಮಧು ಅವರ ಕೊಡುಗೆಯನ್ನು ನಾಯಕರು ಮರೆಯಬಾರದು ಎಂದು ಒತ್ತಾಯಿಸಿದ್ದಾರೆ.ಈಚೆಗೆ ಎಲ್ಲ ಸರ್ಕಾರಗಳಲ್ಲು ಶಿವಮೊಗ್ಗ ಜಿಲ್ಲೆಯ ಶಾಸಕರಿಗೆ ಮೊದಲ ಸಂಪುಟದಲ್ಲೇ ಸಚಿವ ಸ್ಥಾನ ದೊರೆಯುತ್ತಿತ್ತು. ಆದರೆ ಈ ಬಾರಿ ಮೊದಲ ಸಂಪುಟದಲ್ಲಿ ಶಿವಮೊಗ್ಗದ ಹೆಸರು ಇಲ್ಲವಾಗಿದೆ. ಮೇ 20 ರಂದು ನಡೆದ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿಯೇ ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡುವ ನಿರೀಕ್ಷೆಯಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ 8 ಜನರಿಗೆ ಮಾತ್ರವೇ ಸಚಿವರನ್ನಾಗಿ ನೇಮಿಸಿದೆ. ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ರಾಜ್ಯ ನಾಯಕರು ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಕೈತಪ್ಪದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.