ಮಧುರೈ ಆಭರಣ ಅಂಗಡಿಯಲ್ಲಿ ಬೆಂಕಿ: ಇಬ್ಬರು ಸಾವು

ಚೆನ್ನೈ, ನ ೧೪ -ಮಧುರೈ ಜಿಲ್ಲೆಯ ಆಭರಣ ಅಂಗಡಿವೊಂದರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭಾರೀ ಬೆಂಕಿ ದುರಂತದಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಮೃತಪಟ್ಟಿದ್ದು, ಇತರ ಇಬ್ಬರು ಗಾಯಗೊಂಡಿದ್ದಾರೆ.
ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಕೂಡಲೇ ಅಗ್ನಿಶಾಮಕ ತಂಡ ಸೌತ್ ಮಾಸಿ ಬೀದಿಯಲ್ಲಿರುವ ಆಭರಣ ಅಂಗಡಿಗೆ ತೆರಳಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಗಿತ್ತು ಎಂದು ಇಲ್ಲಿನ ಪೊಲೀಸ್ ಪ್ರಧಾನ ಕಚೇರಿಗೆ ಬಂದಿರುವ ವರದಿಗಳು ತಿಳಿಸಿವೆ
ಬೆಂಕಿಯನ್ನು ನಿಯಂತ್ರಣಕ್ಕೆ ತರಲು ತಂಡ ಸಾಹಸ ಪಡುತ್ತಿದ್ದಾಗ ಹಳೆಯ ಎರಡು ಅಂತಸ್ತಿನ ಕಟ್ಟಡ ಕುಸಿದು ನಾಲ್ಕು ಜನರು ಅವಶೇಷಗಳಡಿ ಸಿಕ್ಕಿ ಬಿದ್ದಿದ್ದಾರೆ.
ಅವಶೇಷಗಡಿಯಿಂದ ಅವರನ್ನು ರಕ್ಷಿಸಿ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಅಗ್ನಿಶಾಮಕ ದಳ ಸಿಬ್ಬಂದಿಯಾದ ಕೃಷ್ಣಮೂರ್ತಿ ಮತ್ತು ಶಿವರಸು ಮೃತಪಟ್ಟಿದ್ದಾರೆ. ಗಾಯಗೊಂಡ ಇತರ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ