ಮಧುರಕಾವ್ಯ ಚಲನಚಿತ್ರ ಜು.೨೧ ರಂದು ರಾಜ್ಯಾದ್ಯಂತ ಬಿಡುಗಡೆ

ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೧೩; ಮೆಡಿಕಲ್‌ಮಾಫಿಯಾ ಹೇಗೆ ಆಯುರ್ವೇದವನ್ನು ತುಳಿದು ಹಾಕುತ್ತಿದೆ ಎಂಬ ಕುರಿತ ಚಲನಚಿತ್ರ ಮಧುರ ಕಾವ್ಯ ಚಲನಚಿತ್ರ ಜು. 21ರಂದು ರಾಜ್ಯಾದ್ಯಂತ 70 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರದ ನಾಯಕ ಹಾಗೂಆಯುರ್ವೇದ ವೈದ್ಯರಾದ ಮಧುಸೂದನ್ ಕ್ಯಾತನಹಳ್ಳಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾತನಾಡಿದ ಅವರು ಆಯುರ್ವೇದ ಮತ್ತು ಅಲೋಪಥಿ ವೈದ್ಯಪದ್ಧತಿಯ ನಡುವೆ ನಡೆಯುವ ಘರ್ಷಣೆಯ ಕಥಾವಸ್ತುವನ್ನಿಟ್ಟುಕೊಂಡು  ಈ ಚಿತ್ರವನ್ನು ರೂಪಿಸಲಾಗಿದೆ. ಈ ಚಿತ್ರದಲ್ಲಿ ನಾಯಕಿಯ ಪಾತ್ರವಿಲ್ಲ. ತಾಯಿ ಮಗನ ನಡುವೆ ನಡೆಯುವ ಕಥೆ ಚಿತ್ರದಲ್ಲಿದೆ.ತಾಯಿ ಪಾತ್ರದಲ್ಲಿ ಯಶೋಧ ಅವರು ಕಾಣಿಸಿಕೊಂಡಿದ್ದು, ಖಳನಾಯಕನಾಗಿ ರಾಜಕುಮಾರ್ ನಾಯಕ್‌ ನಟಿಸಿದ್ದಾರೆ. ಚಿತ್ರದಲ್ಲಿ 3 ಹಾಡುಗಳಿದ್ದು ಸತೀಶ್ ಮೌರ್ಯ ಅವರ ಸಂಗೀತ ಸಂಯೋಜನೆಯಿದೆ. ಇತ್ತೀಚೆಗೆ ಚಿತ್ರದ ಟ್ರೈಲರನ್ನು ನಟ ದೇವರಾಜ್  ಬಿಡುಗಡೆ ಮಾಡಿದ್ದಾರೆ ಎಂದರು.ನಾನು ಮೂಲತ: ಮಂಡ್ಯಬಳಿಯ ಕ್ಯಾತನಹಳ್ಳಿಯವನು, ನಾಟಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಹಿಂದಿನ ಕಾಲದಲ್ಲಿ ನಾಟಿ ವೈದ್ಯ ಪದ್ಧತಿಯೇ ಜನಪ್ರಿಯವಾಗಿತ್ತು.ಆದರಿಂದು ಅಲೋಪಥಿ ವೈದ್ಯರು ನಾಟಿ ವೈದ್ಯ ಪದ್ದತಿಯನ್ನು ಹತ್ತಿಕ್ಕುತ್ತಿದ್ದಾರೆ,  ಹಿಂದಿನಿಂದ ಬಂದಿರುವ ಆಯುರ್ವೇದವನ್ನು ಉಳಿಸಬೇಕು, ನಾಟಿವೈದ್ಯಪದ್ಧತಿ ಬೆಳೆಸಬೇಕು ಎಂಬ ಉದ್ದೇಶದಿಂದ ಈ ಸಿನಿಮಾವನ್ನು ನಿರ್ಮಿಸಿದ್ದೇವೆ, ಆಯುರ್ವೇದ ಸಂಪ್ರದಾಯ ಉಳಿಯಬೇಕು ಎನ್ನುವುದೇ ನಮ್ಮ ಮೂಲ ಉದ್ದೇಶ, ಜನರಿಗೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ನಾಟಿ ವೈದ್ಯನಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಲಾಭನಡೆಸುವವರ ವಿರುದ್ಧ ಹೋರಾಟ ನಡೆಸಿ ನಾಟಿವೈದ್ಯ ಪದ್ಧತಿಯನ್ನು ರಕ್ಷಿಸುವಂಥ ಪಾತ್ರವದು. ನಮ್ಮ ಚಿತ್ರದ
ಮೂಲಕ ಸಮಾಜಕ್ಕೆ ಒಂದು ಸಂದೇಶ ಹೇಳಿದ್ದೇವೆ. ಆಯುರ್ವೇದ ವೈದ್ಯಕೀಯ ಪದ್ಧತಿಯನ್ನು ರಕ್ಷಿಸಿಕೊಂಡು ಹೋಗಬೇಕು ಎಂದು ಈ ಚಿತ್ರದ ಮೂಲಕ ಹೇಳಿದ್ದೇನೆ. ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಸಹ ನಾನೇ ವಹಿಸಿಕೊಂಡಿದ್ದೇನೆ. ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಗ್ರಾಮೀಣ ಭಾಗದಲ್ಲಿ ನಾಟಿ ವೈದ್ಯರ ಕುಟುಂಬವೊಂದು ಮಡಿಕಲ್ ಲಾಭಿಯ ವಿರುದ್ಧ ಹೋರಾಡುವ ಕಥೆಯಿದು ಎಂದು ಹೇಳಿದರು. ಉದಯಭಾಸ್ಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ಅಣ್ಣಪ್ಪಸ್ವಾಮಿ, ಸಾತಪ್ಪ, ಜಗನ್ನಾಥ ಶೆಟ್ಟಿ, ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಚಿತ್ರದ ಖಳನಾಯಕ ಅಣ್ಣಪ್ಪಸ್ವಾಮಿ,ಸಂಗೀತ ನಿರ್ದೇಶಕ ಸತೀಶ್ ಮೌರ್ಯ,ರಾಜು ನಾವಿಕ್ ಉಪಸ್ಥಿತರಿದ್ದರು.