ಮಧುಮೇಹ ಸಾರ್ವತ್ರಿಕ ರೋಗ

ತುಮಕೂರು, ನ. ೧೭- ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಇಲಾಖೆ, ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯರ ಸಂಘದ ವತಿಯಿಂದ ಉಚಿತ ಮಧುಮೇಹ ತಪಾಸಣೆ ನಡೆಸಲಾಯಿತು.
ನಗರದ ವಿಶ್ವ ವಿದ್ಯಾಲಯದ ಮುಂಭಾಗ ಮಧುಮೇಹ ತಪಾಸಣೆಯನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಈ ಬಾರಿಯ ಘೋಷವಾಕ್ಯ ಶುಶ್ರೂಕಿಯರು ಬದಲಾವಣೆಯನ್ನು ತರಬಲ್ಲರು ಎಂದು ಘೋಷಿಸಲಾಗಿದೆ. ಅದರಂತೆ ಚಿಕಿತ್ಸೆಯಲ್ಲಿ ಶುಶ್ರೂಕಿಯರ ಪಾತ್ರ ಮಹತ್ವವಾಗಿದೆ ಎಂದರು.
ಮಧುಮೇಹ ಸಾರ್ವತ್ರಿಕ ರೋಗವಾಗಿದೆ. ಬದಲಾದ ಜೀವನ ಶೈಲಿಯಿಂದ ಮಧುಮೇಹ ಹೆಚ್ಚುತ್ತಿದ್ದು, ನಿಯಮಿತವಾಗಿ ವೈದ್ಯರ ಬಳಿ ತಪಾಸಣೆಗೆ ಒಳಪಡುವುದರ ಮೂಲಕ ಇದರಿಂದ ಬರುವ ಹೃದಯ ಸಂಬಂಧಿತ ಸಮಸ್ಯೆಯನ್ನು ತಡೆಯಬಹುದಾಗಿದೆ ಎಂದರು. ಅನಿಯಮಿತ ಮಧುಮೇಹದಿಂದ ಬಳಲುತ್ತಿರುವ ಮಧುಮೇಹಿಗಳು ಕೋವಿಡ್-೧೯ ನಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅದರಿಂದಾಗಿ ಮಧುಮೇಹವನ್ನು ನಿಯಂತ್ರಿಸುವುದು ಅವಶ್ಯಕವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ನಿಯಮಾವಳಿಯನ್ನು ಪಾಲಿಸುವಂತೆ ಸಲಹೆ ಮಾಡಿದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಡಾ. ಶ್ರೀನಾಥ್ ಮಾತನಾಡಿ, ಮಧುಮೇಹ ದಿನಾಚರಣೆ ಅಂಗವಾಗಿ ಮೂವತ್ತು ವರ್ಷ ಮೇಲ್ಪಟ್ಟ ೮೫೦ ಮಂದಿ ಉಚಿತವಾಗಿ ತಪಾಸಣೆಗೆ ಒಳಪಟ್ಟಿದ್ದು, ೧೫೦ ಮಂದಿಗೆ ಮಧುಮೇಹ ಇರುವುದು ಪತ್ತೆಯಾಗಿದೆ ಎಂದು ಹೇಳಿದರು.
ಶುಶ್ರೂಷಕರಿಂದ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರ್ಕಾರ ಜಿಆರ್ಬಿಎಸ್ ಉಪಕರಣ ನೀಡುವ ಮೂಲಕ ಮಧುಮೇಹ ಪತ್ತೆ ಹಚ್ಚುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಇರುವ ಶುಶ್ರೂಷಕರಿಂದಲೇ ಮಧುಮೇಹ ತಪಾಸಣೆಗೆ ಒಳಪಡುವಂತೆ ಮನವಿ ಮಾಡಿದರು.
ಜಿಲ್ಲಾಸ್ಪತ್ರೆಯಲ್ಲಿ ಎನ್‌ಸಿಡಿ ಮತ್ತು ಪ್ರಾಥಮಿಕ ಆರೋಗ್ಯ, ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿಯೂ ತಪಾಸಣೆ ಮಾಡಿಸಿಕೊಳ್ಳುವ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.
ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ರಾಜಶೇಖರಯ್ಯ ಮಾತನಾಡಿ, ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗಿರುವುದು ಅವಶ್ಯಕ. ಈ ನಿಟ್ಟಿನಲ್ಲಿ ಮಧುಮೇಹ ರೋಗಕ್ಕೆ ಒಳಗಾದವರು ನಿಯಮಿತ ವ್ಯಾಯಾಮ ಹಾಗೂ ತಪಾಸಣೆಗೆ ಒಳಪಡುವ ಮೂಲಕ ವೈದ್ಯರ ಸಲಹೆ ಸೂಚನೆಯನ್ನು ಪಾಲಿಸುವುದು ಅತ್ಯವಶ್ಯಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಇತರರು ತಪಾಸಣೆಗೆ ಒಳಗಾದರು.
ಈ ಸಂದರ್ಭದಲ್ಲಿ ಡಾ.ಶ್ರೀನಾಥ್, ಡಾ. ರಾಜಶೇಖರಯ್ಯ, ಡಾ. ಮೋಹನ್, ಡಾ. ಮಹೇಶ್, ಡಾ. ನಾಗರಾಜ ಪಾಟೀಲ್ ಸೇರಿದಂತೆ ಶುಶ್ರೂಷಕ, ಶುಶ್ರೂಷಕಿಯರು ಪಾಲ್ಗೊಂಡಿದ್ದರು.