ಮಧುಮೇಹ ಬರದಂತೆ ಮುಂಜಾಗ್ರತೆ ವಹಿಸಿಕೊಳ್ಳಿ

ಕಲಬುರಗಿ:ನ.15: ಇಂದಿನ ಆಧುನಿಕ ಒತ್ತಡದ ಬದುಕಿನಿಂದ ಸಣ್ಣ ವಯಸ್ಸಿನವರಿಗೆ ಕೂಡಾ ಮಧುಮೇಹ ಕಾಯಿಲೆ ಬರುತ್ತಿದೆ. ಸೂಕ್ತ ಸಮಯಕ್ಕೆ ಆಹಾರ ಸೇವನೆ, ನಿದ್ರೆ, ಸಮತೋಲನ ಆಹಾರ, ಒತ್ತಡಮುಕ್ತ ಜೀವನ, ಯೋಗ, ಧ್ಯಾನದಂತಹ ಕ್ರಮಗಳಂತಹ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಮಧುಮೇಹ ಬರದಂತೆ ಮುಂಜಾಗ್ರತೆ ವಹಿಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ಯುಪಿಎಚ್‍ಸಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಸೋಮವಾರ ಜರುಗಿದ ‘ವಿಶ್ವ ಮಧುಮೇಹ ನಿವಾರಣೆ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆಗೆ ಲಕ್ಷ್ಯ ವಹಿಸದಿರುವದರಿಂದ ಕಾಯಿಲೆಗಳಿಗೆ ನಾವೇ ಆಹ್ವಾನ ನೀಡುವಂತಾಗಿದೆ. ಇಂದಿನ ಜೀವನಶೈಲಿಯಿಂದ ಹೊರಬರದಿದ್ದರೇ, ಮುಂಬರುವ ಕೆಲವೇ ವರ್ಷಗಳಲ್ಲಿ ಭಾರತ ‘ಮಧುಮೇಹಿಗಳ ದೇಶ’ವಾದರೂ ಆಶ್ಚರ್ಯವಿಲ್ಲ. ನಿಯಮಿತ ವ್ಯಾಯಾಮ, ಎಣ್ಣೆಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳ ಸೇವನೆ, ಸಿಹಿ ತಿಂಡಿ-ತಿನಿಸುಗಳ ಸೇವನೆ ವರ್ಜಿಸುವುದು, ಹೊಟ್ಟಭಾರವೆನಿಸುವ ಹಾಗೆ ಆಹಾರ ಸೇವನೆ ಮಾಡದಿರುವ ದಿನನಿತ್ಯದ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದಲ್ಲಿ ಏನಾದರೂ ಏರು-ಪೇರಾದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ಆರ್.ರತ್ನಹೊನ್ನದ್, ಗುರುರಾಜ ಕೈನೂರ್, ಜಗನಾಥ ಗುತ್ತೇದಾರ, ಗಂಗಾಜ್ಯೋತಿ ಗಂಜಿ, ರೇಷ್ಮಾ ನಕ್ಕುಂದಿ, ನಾಗೇಶ್ವರಿ ಮುಗಳಿವಾಡಿ, ಸಂಗಮ್ಮ ಅತನೂರ್, ಮಂಗಳಾ ಚಂದಾಪುರೆ, ಲಕ್ಷ್ಮೀ, ಶ್ರೀದೇವಿ, ಅರ್ಚನಾ, ಅನಿತಾ, ನಾಗಮ್ಮ ಚಿಂಚೋಳಿ ಸೇರಿದಂತೆ ಮತ್ತಿತರರಿದ್ದರು.