ಮಧುಮೇಹಕ್ಕೆ ಮನೆಮದ್ದು

೧. ಮಧುಮೇಹಿಗಳಿಗೆ ಅರಿಶಿನ ಅತ್ಯಂತ ಉಪಕಾರಿ. ಅರ್ಧ ಚಮಚ ಶುದ್ಧ ಅರಿಶಿನದ ಪುಡಿಯನ್ನು ಅರ್ಧ ಚಮಚ ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸುತ್ತಾ ಬಂದರೆ ಮಧುಮೇಹಿಗಳಿಗೆ ತುಂಬಾ ಲಾಭವಾಗುತ್ತದೆ.
೨. ಅರಿಶಿನದ ಕೊಂಬು ಹಾಗೂ ಬೆಟ್ಟದ ನೆಲ್ಲಿಕಾಯಿ ಎರಡನ್ನೂ ಸಮಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣಗೆ ಪುಡಿಮಾಡಿ ಬಟ್ಟೆಯಲ್ಲಿ ಶೋಧಿಸಿಕೊಂಡು ಅರ್ಧ ಚಮಚ ಪುಡಿಯನ್ನು ಬಾಯಿಗೆ ಹಾಕಿಕೊಂಡು ಬಿಸಿನೀರು ಕುಡಿಯಿರಿ.
೩. ಆರಂಭಿಕ ಹಂತದಲ್ಲೇ ಮೆಂತ್ಯದ ಸೊಪ್ಪಿನ ರಸ ೨ ಚಮಚ ಸೇವಿಸುತ್ತಿದ್ದರೆ ಮಧುಮೇಹ ಉಲ್ಬಣಿಸುವುದಿಲ್ಲ.
೪. ನೇರಳೆ ಹಣ್ಣಿನ ಬೀಜವನ್ನು ಪುಡಿಮಾಡಿ ಸೇವಿಸುತ್ತಾ ಬಂದರೆ ಮಧುಮೇಹ ಹತೋಟಿಗೆ ಬರುತ್ತದೆ.
೫. ಹಾಗಲಕಾಯಿಯ ರಸ ಮಧುಮೇಹಿಗಳಿಗೆ ಅತಿಉತ್ತಮವಾದುದು. ದಿನನಿತ್ಯದಲ್ಲಿ ಸೇವಿಸುವುದರಿಂದ ನಿಯಂತ್ರಣದಲ್ಲಿರುತ್ತದೆ.
೬. ತುಂಬೆಸೊಪ್ಪು, ಬೇವಿನ ಎಲೆಗಳು ಹಾಗೂ ಓಮದ ಕಾಳು (ಅಜವಾನ) ಇವುಗಳನ್ನು ನೆರಳಲ್ಲಿ ಒಣಗಿಸಿ ಪುಡಿಮಾಡಿ ನುಣುಪಾಗಿ ಬಟ್ಟೆಯಲ್ಲಿ ಶೋಧಿಸಿಕೊಳ್ಳಿ. ಇದನ್ನು ಪ್ರತಿರಾತ್ರಿ ಮಲಗುವ ಮುಂಚೆ ಅರ್ಧ ಚಮಚ ಸೇವಿಸುತ್ತಾ ಬನ್ನಿ. ಮಧುಮೇಹ ಸಂಪೂರ್ಣ ಹತೋಟಿಯಲ್ಲಿರುತ್ತದೆ.
೭. ಗೋಧಿ ಹುಲ್ಲಿನ ರಸವನ್ನು ೨೧ ದಿನಗಳು ಪ್ರತಿದಿನ ಬೆಳಿಗ್ಗೆ ಬರೀಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಸಾಕಷ್ಟು ಹತೋಟಿಗೆ ಬರುತ್ತದೆ. ಅದರ ಜೊತೆಗೆ ಸಾಕಷ್ಟು ಪೌಷ್ಠಿಕಾಂಶಗಳು ಸಿಗುತ್ತವೆ.
೮. ೨ ಚಮಚ ಬಿಲ್ವಪತ್ರೆ ಎಲೆಯ ರಸ, ಅರ್ಧ ಚಮಚ ಜೇನುತುಪ್ಪದ ಜೊತೆ ಬೆಳಿಗ್ಗೆ ಬರೀಹೊಟ್ಟೆಯಲ್ಲಿ ಸೇವಿಸಿ (೨೧ ದಿನಕ್ಕೆ ಪರೀಕ್ಷಿಸಿ) ಮಧುಮೇಹ ಹತೋಟಿಗೆ ಬರುತ್ತದೆ.
೯. ಮೆಣಸಿನಕಾಯಿ ಗಿಡದ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಕಷಾಯ ತಯಾರಿಸಿ ಶೋಧಿಸಿ ಕುಡಿಯಿರಿ. ಇದರಿಂದ ಇನ್ಸುಲಿನ್ ಪ್ರಮಾಣ ಶರೀರದಲ್ಲಿ ಹೆಚ್ಚಾಗುತ್ತದೆ.
೧೦. ನಿಂಬೆಹುಲ್ಲನ್ನು ನೀರಿನಲ್ಲಿ ಹಾಕಿ ಕುದಿಸಿ ಕಷಾಯ ಮಾಡಿ ಕುಡಿಯಿರಿ.
೧೧. ಬ್ರೊಕೊಲಿಯನ್ನು ಚೆನ್ನಾಗಿ ಉಪ್ಪಿನ ನೀರಿನಲ್ಲಿ ತೊಳೆದು ಸಲಾಡ್ ರೂಪದಲ್ಲಿ ಅಥವಾ ಅರ್ಧ ಬೇಯಿಸಿ ಆಹಾರದ ಜೊತೆ ಸೇವಿಸಿ ಮಧುಮೇಹ ಕಡಿಮೆ ಆಗುತ್ತದೆ.
೧೨. ಕಹಿಬೇವಿನ ಎಲೆಯನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ಓಮದ ಕಾಳನ್ನು (ಅಜವಾನ) ಪುಡಿ ಮಾಡಿ ಬೆರೆಸಿ ಪ್ರತಿದಿನ ೧ ಚಮಚ ಸೇವಿಸುತ್ತಾ ಬಂದರೆ ೧ ತಿಂಗಳಲ್ಲಿ ಮಧುಮೇಹ ಹತೋಟಿಗೆ ಬರುತ್ತದೆ.
೧೩. ಹಾಗಲಕಾಯಿಯ ರಸವನ್ನು ಅಥವಾ ಅಡುಗೆಯಲ್ಲಿ ಹಾಗಲಕಾಯಿಯನ್ನು ಯಥೇಚ್ಛವಾಗಿ ಉಪಯೋಗಿಸುತ್ತಾ ಬಂದರೆ ಸಾಕಷ್ಟು ಪ್ರಯೋಜನವಾಗುತ್ತದೆ.
೧೪. ಹಾಗಲಕಾಯಿಯ ಗಿಡ ಇದ್ದರೆ ಅದರ ಸೊಪ್ಪಿನ ಕಷಾಯವನ್ನು ತಯಾರಿಸಿ ಸೇವಿಸುವುದರಿಂದಲೂ ಅನುಕೂಲವಾಗುತ್ತದೆ.
೧೫. ಗೋಧಿಯನ್ನು ರಾತ್ರಿ ನೆನೆಸಿ ಮಾರನೇ ದಿನ ನೆನೆದ ನೀರನ್ನು ಬಿಸಾಡದೆ ಅದರಲ್ಲಿಯೇ ಗೋಧಿಯನ್ನು ರುಬ್ಬಿ ಅದಕ್ಕೆ ಸ್ವಲ್ಪ ಶುಂಠಿ ಪುಡಿ, ಕಾಳುಮೆಣಸಿನಪುಡಿಯನ್ನು ೧ ಚಿಟಿಕೆಯಷ್ಟು ಹಾಕಿ ಅದರ ಜೊತೆ ಸೇರಿಸಿ ಸೇವಿಸಬೇಕು. (೨೧ ದಿನ).
೧೬. ಬಾಳೆಗಿಡದ ಬೇರನ್ನು ತೆಗೆದು ಒಣಗಿಸಿ ಪುಡಿಮಾಡಿಟ್ಟುಕೊಳ್ಳಿ. ಪ್ರತಿದಿನ ರಾತ್ರಿ ೧ ಚಮಚ ಪುಡಿಯನ್ನು ತೆಗೆದುಕೊಳ್ಳಿ. ಇದರಿಂದ ಶರೀರಕ್ಕೆ ಸಾಕಷ್ಟು ಪೌಷ್ಠಿಕಾಂಶವೂ ಸಿಗುತ್ತದೆ. ಸಕ್ಕರೆಯ ಅಂಶವೂ ಕಡಿಮೆ ಆಗುತ್ತದೆ.
೧೭. ಮುಸುಕಿನ ಜೋಳದ ಮೇಲ್ಪದರದಲ್ಲಿರುವ ರೇಷ್ಮೆಯ ರೀತಿ ಇರುವ ಎಳೆಯನ್ನು ಸಂಗ್ರಹಿಸಿಕೊಳ್ಳಿ. ಅದರ ಕಷಾಯ ಮಾಡಿ ಕುಡಿಯುತ್ತಾ ಬಂದರೆ ರಕ್ತದಲ್ಲಿರುವ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ.
೧೮. ಹಸಿಮೆಣಸಿನಕಾಯಿಯ ಗಿಡದ ಎಲೆಯನ್ನು ಸಂಗ್ರಹಿಸಿ ಅದರ ಕಷಾಯವನ್ನು ಕುಡಿಯುತ್ತಾ ಬಂದರೆ ಮಧುಮೇಹಿಗಳಿಗೆ ತುಂಬಾ ಅನುಕೂಲ ಹಾಗೂ ಹೃದಯದ ರಕ್ತನಾಳಗಳು ಶುದ್ಧವಾಗುತ್ತವೆ.
೧೯. ಮೆಂತ್ಯದ ಕಾಳುಗಳನ್ನು ರಾತ್ರಿಯೇ ನೀರಿನಲ್ಲಿ ನೆನೆಹಾಕಿ ಬೆಳಿಗ್ಗೆ ಎದ್ದ ತಕ್ಷಣ ನೆನೆಸಿರುವ ನೀರನ್ನು ಮಾತ್ರ ಕುಡಿಯಿರಿ. ಅದೇ ಮೆಂತ್ಯದ ಕಾಳನ್ನು ಮೊಳಕೆ ಕಟ್ಟಿ ಅದರಲ್ಲಿ ಕೋಸಂಬರಿ ಅಥವಾ ಅಡುಗೆಗೆ ಹಾಕಿ ಉಪಯೋಗಿಸಿ. ಇದರಿಂದ ಮಧುಮೇಹಿಗಳಿಗೆ ಸಕ್ಕರೆಯ ಅಂಶ ಏರುಪೇರಾಗದಂತೆ ರಕ್ಷಿಸುತ್ತದೆ.
೨೦. ಬೆಟ್ಟದ ನೆಲ್ಲಿಕಾಯಿ ಹಾಗೂ ಹಸಿಅರಿಶಿನ ಎರಡನ್ನೂ ಸಮಪಾಲು ತೆಗೆದುಕೊಂಡು ರುಬ್ಬಿ ರಸ ತೆಗೆದುಕೊಳ್ಳಿ. ಅದನ್ನು ಶೋಧಿಸಿ ತೆಗೆದಿಟ್ಟುಕೊಳ್ಳ್ಳಿ. ಪ್ರತಿನಿತ್ಯ ೨ ಚಮಚ ರಸಕ್ಕೆ ೧ ಚಮಚ ಶುದ್ಧ ಜೇನುತುಪ್ಪ ಸೇರಿಸಿ ಸೇವಿಸುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ. ಸರಿಯಾಗಿ ಸೇವಿಸುತ್ತಾ ಬಂದರೆ ಸಂಪೂರ್ಣವಾಗಿ ಹತೋಟಿಯಲ್ಲಿರುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧