ಮಧುಗಿರಿ ಜಿಲ್ಲೆ ಘೋಷಣೆಗೆ ಶಾಸಕರ ಒತ್ತಾಯ

ಮಧುಗಿರಿ, ನ. ೩- ಮಧುಗಿರಿ ಜಿಲ್ಲೆಯಾಗದ ಹೊರತು ಅಭಿವೃದ್ದಿ ಅಸಾಧ್ಯ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಹೇಳಿದರು.
ಪಟ್ಟಣದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ನಡೆದ ೬೫ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಧುಗಿರಿ ಸ್ವಾತಂತ್ರ್ಯ ಪೂರ್ವದಿಂದಲೂ ಉಪವಿಭಾಗವಾಗಿದ್ದು, ಅಭಿವೃದ್ದಿಯಲ್ಲಿ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ ಯಾವುದೇ ಕೈಗಾರಿಕೆಗಳಿಲ್ಲ, ನದಿ ಮೂಲಗಳಿಲ್ಲ, ಗಣಿಗಾರಿಕೆ ಇಲ್ಲ ರಾಜಧಾನಿಗೆ ಸಮೀಪವಿದ್ದರೂ ಅಭಿವೃದ್ದಿ ವಂಚಿತವಾಗಿದೆ. ಸರ್ಕಾರ ಹೊಸ ಜಿಲ್ಲೆ ರಚನೆಯನ್ನು ಕೈಗೆತ್ತಿಕೊಂಡು, ಈಗಾಗಲೇ ಶೈಕ್ಷಣಿಕ ಜಿಲ್ಲೆಯಾಗಿರುವ ಮಧುಗಿರಿಯನ್ನು ಕಂದಾಯ ಜಿಲ್ಲೆಯಾಗಿ ಘೋಷಿಸಬೇಕು. ಸಿರಾ ಉಪಚುನಾವಣೆ ನಿಮಿತ್ತ ಡಿ.ಕೈಮರದ ನನ್ನ ಮನೆಯಲ್ಲಿ ವಾಸ್ತವ್ಯ ಹೂಡಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ರವರ ಬಳಿ ಮಧುಗಿರಿಯ ಅಭಿವೃದ್ದಿ ಬಗ್ಗೆ ಚರ್ಚೆ ನಡೆಸಿದ್ದು ಅಧಿಕಾರವಿಲ್ಲದಿದ್ದರೂ ಮಧುಗಿರಿಯನ್ನು ಜಿಲ್ಲೆಯಾಗಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದೇನೆ ಎಂದರು.
ಕನ್ನಡ ಇಂದು ಬದುಕಿನ ಉಸಿರಾಗಿದ್ದು, ಕನ್ನಡ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕನ್ನಡದ ತೇರನ್ನು ರಾಜ್ಯದ ಎಲ್ಲ ನೆಲದಲ್ಲೂ ಎಳೆಯಬೇಕು. ಕೇವಲ ನವೆಂಬರ್‍ನಲ್ಲಿ ಮಾತ್ರ ಈ ಬಗ್ಗೆ ಭರವಸೆ, ಭಾಷಣ ಸಲ್ಲದು. ಕನ್ನಡಕ್ಕೆ ಹಲವಾರು ಮಹನೀಯರು ಸೇವೆ ಸಲ್ಲಿಸಿದ್ದು, ಅವರನ್ನು ಸ್ಮರಿಸಿಕೊಂಡು ಅವರ ಮಾರ್ಗದಲ್ಲೇ ನಾವು ನಡೆಯಬೇಕು. ರಾಜಧಾನಿ ಬೆಂಗಳೂರಲ್ಲೇ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದು ವಿಷಾದನೀಯ ಎಂದರು. ಕನ್ನಡಿಗರಾಗಿ ಕನ್ನಡವನ್ನು ಬಳಸದಿರುವುದು ನಾಡಿಗೆ ಮಾಡುವ ಮಹಾ ದ್ರೋಹ. ದೇಶದಲ್ಲಿನ ಸರ್ಕಾರಗಳು ರೈತಪರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ರೈತ ಸದೃಢನಾದರೆ ದೇಶ ಸದೃಢವಾಗಲಿದ್ದು, ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಉಪವಿಭಾಗಾಧಿಕಾರಿ ಡಾ.ನಂದಿನಿದೇವಿ ಮಾತನಾಡಿ, ಮಧುಗಿರಿಯ ಮೊದಲ ಉಪವಿಭಾಗಾಧಿಕಾರಿ ಮಾಸ್ತಿ ವೆಂಕಟೇಶ ಅಯ್ಯಾಂಗಾರ್ ಸೇರಿದಂತೆ ಕನ್ನಡದ ಏಕೀಕರಣಕ್ಕಾಗಿ ದುಡಿದ ಹಲವಾರು ಮಹನೀಯರನ್ನು ನೆನೆಯುವ ದಿನವಾಗಿದೆ. ಅದರ ಫಲವಾಗಿ ದೇವರಾಜ ಅರಸುರವರು ೧೯೭೩ ನ.೧ ರಂದು ಕರ್ನಾಟಕ ಎಂದು ನಾಮಕರಣ ಮಾಡಿದ್ದರು. ರಾಜ್ಯವು ಹಲವು ವಿವಿಧ ಸಂಪತ್ತುಗಳಿಂದ ಸಮೃದ್ಧಿಯಾಗಿದ್ದು ಅವುಗಳನ್ನು ಉಳಿಸಬೇಕಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳಿದ ಹೆಮ್ಮೆಯ ನಾಡು ನಮ್ಮದು. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇತರೆ ಭಾಷೆಗಳು ಅನಿವಾರ್ಯವಾದರೂ ಕನ್ನಡವನ್ನು ಉಸಿರಾಗಿಸಿಕೊಂಡು ಬದುಕಬೇಕು. ಸರ್ಕಾರದ ನಿಯಮಾವಳಿಯಂತೆ ಕರೊನಾ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸಿ ಎಂದರು.
ಪ್ರಧಾನ ಭಾಷಣಕಾರ ಕನ್ನಡ ಉಪನ್ಯಾಸಕ ರಂಗಪ್ಪ ಮಾತನಾಡಿ, ೨ ಸಾವಿರ ವರ್ಷಗಳ ಇತಿಹಾಸದ ನಮ್ಮ ಕನ್ನಡವು ಸುಲಿದ ಬಾಳೆಹಣ್ಣಿನಷ್ಟೆ ಸರಳ. ಕನ್ನಡದ ಹಲವು ಹಿರಿಯ ಕವಿಗಳ ಮಾತೃಭಾಷೆ ಬೇರೆಯಾದರೂ ಕನ್ನಡದಲ್ಲೇ ಹೆಚ್ಚು ಸಕ್ರೀಯರಾಗಿದ್ದರು. ಪಟ್ಟಣದ ಅಂಗಡಿ ಮಳಿಗಳ ನಾಮಫಲಕವನ್ನು ಕನ್ನಡದಲ್ಲಿ ಬರೆಸಬೇಕಿದೆ. ಕನ್ನಡ ಇಂದು ಆತಂಕದಲ್ಲಿದ್ದು ಅದರ ಉಳಿವಿಗಾಗಿ ರಾಜ್ಯದ ಸಿಎಂ ನಿಂದ ಐ.ಎ.ಎಸ್ ನಿಂದ ಸಾಮಾನ್ಯ ಜನರು ಸಹ ಕನ್ನಡದಲ್ಲೇ ಸಹಿ ಮಾಡುವುದು ಹಾಗೂ ವ್ಯವಹರಿಸುವುದು ಆರಂಭವಾಗಬೇಕು. ಆಗಮಾತ್ರ ಕನ್ನಡದ ಹೊಳಪು ಹೆಚ್ಚಲಿದೆ ಎಂದರು.
ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‌ಗಳಾದ ಪಿಎಸೈ ಕಾಂತರಾಜು, ನಿಲಯಪಾಲಕ ಚಿಕ್ಕರಂಗಪ್ಪ, ಎಎಸೈ ಸಾಕ್ಷಪ್ಪ, ನರಸಿಂಹಮೂರ್ತಿ, ಡಿ.ಟಿ. ಸಂಜೀವಮೂರ್ತಿ, ಮಧು, ವೈಷ್ಣವಿ ಗುರುಕಿರಣ್, ಬಡಕನಹಳ್ಳಿ ರಾಘವೇಂದ್ರ, ಮಾರುತಿ.ಜಿ.ಹೆಚ್. ಕೀರ್ತಿಶ್ರೀ, ಸಿದ್ದಗಂಗಮ್ಮ, ಗುಂಡಗಲ್ಲು ಶಿವಣ್ಣ, ಮೂಡ್ಲೇಗೌಡ, ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ. ವಿಶ್ವನಾಥ್, ಡಿವೈಎಸ್ಪಿ ಪ್ರವೀಣ್, ತಾ.ಪಂ. ಇಓ ದೊಡ್ಡಸಿದ್ದಯ್ಯ, ಜಿ.ಪಂ. ಸದಸ್ಯ ಚೌಡಪ್ಪ, ಪುರಸಭೆ ಸದಸ್ಯರಾದ ಜಗನ್ನಾಥ್, ನಾರಾಯಣ್, ಸರ್ಕಾರಿ ನೌಕರರ ಸಂಘದ ಜಯರಾಮಯ್ಯ, ವೆಂಕಟೇಶಯ್ಯ, ಟಿಹೆಚ್‌ಓ ಡಾ.ರಮೇಶ್‌ಬಾಬು, ಬಿಇಓ ನಂಜುಂಡಯ್ಯ, ಬಿಆರ್‍ಸಿ ಆನಂದ್, ಸಿಡಿಪಿಓ ಅನಿತಾ, ಸಿಪಿಐ ಸರ್ದಾರ್ ಮತ್ತಿತರರು ಉಪಸ್ಥಿತರಿದ್ದರು.