ಮಧುಗಿರಿ ಕಂದಾಯ ಜಿಲ್ಲೆ ಘೋಷಣೆಗೆ ಒತ್ತಾಯ

ಮಧುಗಿರಿ, ನ. ೨೨- ಕಂದಾಯ ಜಿಲ್ಲೆಯನ್ನಾಗಿ ಮಧುಗಿರಿಯನ್ನು ಸರ್ಕಾರ ಘೋಷಿಸುವಂತೆ ಕೆಪಿಸಿಸಿ ಸದಸ್ಯ ಹಾಗೂ ಜೆಎಸ್‌ಎಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಗದೀಶ್‌ರೆಡ್ಡಿ ಆಗ್ರಹಿಸಿದರು.
ಪಟ್ಟಣದ ನೃಪತುಂಗ ವೃತ್ತದ ಬಳಿಯಿರುವ ಡಾ. ಬಿ. ಆರ್. ಅಂಬೇಡ್ಕರ್ ಆಟೊ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ಖಾಸಗಿ ಬಸ್ ನಿಲ್ದಾಣದ ಮದಕರಿನಾಯಕ ವೃತ್ತದ ಬಳಿಯ ಆಟೋ ಚಾಲಕರುಗಳು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಟೋ ಚಾಲಕರುಗಳಿಗೆ ಸಮವಸ್ತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರವೆಂಬ ೩೧ನೇ ಜಿಲ್ಲೆಯನ್ನಾಗಿ ಘೋಷಿಸಲು ಮುಂದಾಗಿದ್ದು, ತುಮಕೂರು ಜಿಲ್ಲೆಯು ಹತ್ತು ತಾಲ್ಲೂಕುಗಳನ್ನೊಳಗೊಂಡ ಅತಿ ದೊಡ್ಡ ಜಿಲ್ಲೆಯಾಗಿದೆ. ನಂಜುಂಡಪ್ಪ ವರದಿಯಾಧರಿತ ಅತಿ ಹಿಂದುಳಿದ ತಾಲ್ಲೂಕುಗಳಾದ ಪಾವಗಡ, ಮಧುಗಿರಿ, ಕೊರಟಗೆರೆ, ಸಿರಾ ಸ್ವಾತಂತ್ರ್ಯ ಪೂರ್ವದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಹೊಂದಿರುವುದು, ಐತಿಹಾಸಿಕ ಹಿನ್ನೆಲೆಯುಳ್ಳ ಮತ್ತು ಈಗಾಗಲೇ ಶೈಕ್ಷಣಿಕ ಜಿಲ್ಲೆಯಾಗಿರುವ ಮಧುಗಿರಿಯನ್ನು ಕೇಂದ್ರ ಸ್ಥಾನವನ್ನಾಗಿಸಿ ಕಂದಾಯ ಜಿಲ್ಲೆಯನ್ನಾಗಿ ಘೋಷಿಸಿರುವುದರಿಂದ ಇಲ್ಲಿನ ಜನರ ಬದುಕು ಹಸನಾಗುತ್ತದೆ ಎಂದರು.
ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಕೇಂದ್ರ, ಕೈಗಾರಿಕಾ ವಲಯಗಳ ಸ್ಥಾಪನೆ ಶಾಶ್ವತ ನೀರಾವರಿ ಯೋಜನೆ ಜಾರಿಯಾದರೆ ಇಲ್ಲಿನ ಜನ ಸ್ವಾವಲಂಬಿಗಳಾಗಿ ಬದುಕು ಸಾಧಿಸಲು ಸಾಧ್ಯ ಎಂದರು.
ಮಧುಗಿರಿ ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಗಮನ ಸೆಳೆಯಲು ಹೋರಾಟಗಳನ್ನು ಹಮ್ಮಿಕೊಂಡರೆ ನಾನು ಸಕ್ರಿಯನಾಗಿ ಪಾಲ್ಗೊಳ್ಳುತ್ತೇನೆ. ಯಾವುದೇ ರಾಜಕಾರಣಿಗಳು ಅಧಿಕಾರಿಗಳು ಮಾಡದಂತಹ ಸೇವೆ ಆಟೊರೀಕ್ಷಾ ಚಾಲಕರುಗಳು ಸಮಾಜದಲ್ಲಿ ಹಗಲಿರುಳು ಮಾಡುತ್ತಾರೆ. ಯಾವುದೇ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಬರುತ್ತಾರೆ.
ಕೇವಲ ಆಟೊ ರಿಕ್ಷಾ ಚಾಲಕರಾಗಿ ಇರದೆ ಕಾರಿನ ಚಾಲಕರಾಗಿ ಪಟ್ಟಣದಲ್ಲಿ ಮನೆ ನಿರ್ಮಿಸಿಕೊಂಡು ಮತ್ತೊಬ್ಬರಿಗೆ ಸಹಾಯ ಮಾಡುವ ಹಂತಕ್ಕೆ ಆಟೊ ಚಾಲಕರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಅಂತಹ ಸಂದರ್ಭದಲ್ಲಿ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ನನ್ನ ಸಹಕಾರ ಇರುತ್ತದೆ ಎಂದರು.
ಪುರಸಭಾ ಸದಸ್ಯ ಚಂದ್ರಶೇಖರಬಾಬು ಮಾತನಾಡಿ, ಕೊರೊನಾದಂಥಹ ಕಷ್ಟಕಾಲದಲ್ಲಿ ಬಡಜನರಿಗೆ ಸಹಾಯ ಹಸ್ತ ಕಲ್ಪಿಸಿದ ಜಗದೀಶ್‌ರೆಡ್ಡಿ ಅವರ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ. ಎಸ್ .ಚಂದ್ರಶೇಖರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಿ. ನರಸಿಂಹಮೂರ್ತಿ, ದಲಿತ ಸಂಘರ್ಷ ಸಮಿತಿಯ ದೊಡ್ಡೇರಿ ಕಣಿಮಯ್ಯ, ಎಂ. ವೈ ಶಿವಕುಮಾರ್, ಮುಖಂಡ ಕಾಳೇಗೌಡ, ಡಾ. ಬಿ. ಆರ್ .ಅಂಬೇಡ್ಕರ್ ಆಟೊ ಚಾಲಕರ ಸಂಘದ ನಟರಾಜು, ಹರೀಶ್, ಮಂಜುನಾಥ್, ಅರುಣ, ರಾಖಿ, ಕಾರ್ತಿಕ್ ಮತ್ತು ಖಾಸಗಿ ಬಸ್ ನಿಲ್ದಾಣದ ಉಪನ್ಯಾಸಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಂಗಪ್ಪ, ಶಾಸಕ ಶಿವಣ್ಣ, ಕೃಷ್ಣಮೂರ್ತಿ, ಆಟೋ ಚಾಲಕರುಗಳಾದ ಪ್ರಭುದೇವ್, ಶಿವಣ್ಣ, ಮಂಜುನಾಥ್, ಇಲಿಯಾಸ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.