ಮಧುಮೇಹ ಮತ್ತು ಬೊಜ್ಜಿನಿಂದ ಬಳಲುತ್ತಿರುವವರ ಆರೈಕೆಗೆ  ಪ್ರತಿಜ್ಞೆ

ಬೆಂಗಳೂರು, ನೊವೊ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ (ಎನ್ಎನ್ಇಎಫ್) ಮತ್ತು ಕರ್ನಾಟಕ ಸರ್ಕಾರವು ಇಂದು ರಾಜ್ಯದಲ್ಲಿ ಮಧುಮೇಹ ಮತ್ತು ಬೊಜ್ಜು ಹೊಂದಿರುವ ಜನರಿಗೆ ಶಿಕ್ಷಣ, ಚಿಕಿತ್ಸೆ ಮತ್ತು ಆರೈಕೆಯ ಮಟ್ಟವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಒಟ್ಟಾಗಿ ಕಾರ್ಯನಿರ್ವಹಣೆ ಮಾಡಲು ಪ್ರತಿಜ್ಞೆ ಮಾಡಿದೆ.

ಈ ಎರಡು ದೀರ್ಘಕಾಲದ ರೋಗಗಳನ್ನು ಹೊಂದಿರುವ ಜನರ ಜೀವನವನ್ನು ಧನಾತ್ಮಕವಾಗಿ ಪರಿಣಾಮ ಬೀರುವ ಕ್ರಿಯಾಯೋಜನೆಯನ್ನು ರಚಿಸುವ ನಿಟ್ಟಿನಲ್ಲಿ ಎರಡೂ ಸಂಸ್ಥೆಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತವೆ. ಪ್ರಸ್ತಾವಿತ ಕ್ರಿಯಾ ಯೋಜನೆಯು ಕರ್ನಾಟಕದ ವೈದ್ಯಕೀಯ ಕಾಲೇಜುಗಳಾದ್ಯಂತ ಬಹು ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ಇಂತಹ ಸಮಸ್ಯೆಗಳ ಬಗ್ಗೆ ವೈದ್ಯರು ಮತ್ತು ರೋಗಿಗಳಿಗೆ ಶಿಕ್ಷಣವನ್ನು ಒಳಗೊಂಡಿರುತ್ತದೆ ಎಂದು ಎನ್ಎನ್ಇಎಫ್ ನ ವ್ಯವಸ್ಥಾಪಕ ಟ್ರಸ್ಟಿ ವಿಕ್ರಾಂತ್ ಶ್ರೋತ್ರಿಯಾ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, “ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ನಮ್ಮ ರಾಜ್ಯ ಸರ್ಕಾರವು ಕಳೆದ 2 ವರ್ಷಗಳಿಂದ ಅತ್ಯಂತ ಕ್ರಿಯಾಶೀಲವಾಗಿದೆ. ಸಾಂಕ್ರಾಮಿಕ ರೋಗದ ನಂತರ ನಾವು ನಮ್ಮ ರಾಜ್ಯ ನಿವಾಸಿಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಅವಲೋಕಿಸಿದಾಗ ಮಧುಮೇಹ ಮತ್ತು ಬೊಜ್ಜು ಗಂಭೀರ ಸ್ವರೂಪದ್ದಾಗಿದ್ದು, ಈ ರೋಗಗಳು ಮೌನ ಕೊಲೆಗಾರರ ಎಂಬುದನ್ನು ಅರಿತುಕೊಂಡಿದ್ದೇವೆ’’ ಎಂದರು.

“ನೊವೊ ನಾರ್ಡಿಸ್ಕ್ ಎಜುಕೇಶನ್ ಫೌಂಡೇಶನ್ ನಂತಹ ಜಾಗತಿಕ ಮಟ್ಟದ ಸಂಸ್ಥೆಯು ಬೆಂಗಳೂರಿನಲ್ಲಿ ಭಾರತದ ತನ್ನ ಕೇಂದ್ರ ಕಚೇರಿಯನ್ನು ಸ್ಥಾಪಿಸಿರುವುದು ಸಂತಸ ತಂದಿದೆ. ಮಧುಮೇಹ ಮತ್ತು ಬೊಜ್ಜಿನಿಂದ ಉಂಟಾಗುವ ತೊಡಕುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಸಂಸ್ಥೆಯು ಕೆಲಸ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ. ಈ ಸಂಸ್ಥೆಯು ಕೆಲವು ಪರಿಣತಿ ಮತ್ತು ಜ್ಞಾನವನ್ನು ಕರ್ನಾಟಕದೊಂದಿಗೆ ಹಂಚಿಕೊಳ್ಳಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 5 ಪ್ರಕಾರ ಅಧಿಕ ತೂಕ ಅಥವಾ ಬೊಜ್ಜು (BMI =25.0 kg/m2) ಹೊಂದಿರುವ ಮಹಿಳೆಯರ ಶೇಕಡಾವಾರು ಪ್ರಮಾಣವು 2015-16 ರಲ್ಲಿ ಶೇ.23.3 ರಿಂದ 2019-20 ರಲ್ಲಿ ಶೇ.30.1 ಕ್ಕೆ ಹೆಚ್ಚಳವಾಗಿದೆ. ಇದೇ ಸಮಯದಲ್ಲಿ ಪುರುಷರಲ್ಲಿ ಶೇ.22.1 ರಿಂದ ಶೇ.30.9 ಕ್ಕೆ ಹೆಚ್ಚಳವಾಗಿದೆ. ಮಕ್ಕಳಲ್ಲಿ ಇದರ ಪ್ರಮಾಣ ಶೇ.3.2 ರಷ್ಟರವರೆಗೆ ಏರಿಕೆಯಾಗಿದೆ. ಅಲ್ಲದೇ, ಭಾರತದಲ್ಲಿ ಶೇ.67 ರಷ್ಟು ಜನರು ಅಧಿಕ ತೂಕ ಅಥವಾ ಬೊಜ್ಜಿನೊಂದಿಗೆ ಟೈಪ್ 2 ಡಯಾಬಿಟಿಸ್ (ಟಿ2ಡಿ) ಸಮಸ್ಯೆಯಲ್ಲಿದ್ದರೆ, ಸುಮಾರು ಶೇ.57% ರಷ್ಟು ಜನರು ಡಯಾಬಿಟಿಸ್ ಇದ್ದರೂ ಅದಕ್ಕೆ ಚಿಕಿತ್ಸೆ ಪಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಡಯಾಬಿಟಿಸ್ ಮತ್ತಿತರೆ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು, ಡಯಾಬಿಟಿಸ್ ಆರೈಕೆಯನ್ನು ಮಾಡುವುದು ಮತ್ತು ರೋಗಿಗಳಿಗೆ ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡುವಂತಹ ಕಾರ್ಯಗಳು ಜರೂರಾಗಿ ಆಗಬೇಕಿದೆ.