ಮದ್ರಿಕಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಬೇಟಿ

ಶಹಾಪುರ :ಜು.25: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಸಂಬಂಧಿಸಿದ ಅಭಿಯಂತರರು ಜಂಟಿ ಸಮೀಕ್ಷೆಯನ್ನು ಮಾಡಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಸೂಚಿಸಿದರು.

ಶಹಾಪುರ ತಾಲೂಕಿನ ಮದ್ರಿಕಿ ಗ್ರಾಮಕ್ಕೆ ಭೇಟಿ ನೀಡಿ ಮನೆಯಿಂದ ಹಾನಿಯಾದ ಮನೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ನಗರ ಮತ್ತು ಗ್ರಾಮದ ಹಳ್ಳ, ಕೆರೆ, ನದಿಯ ನೀರಿನ ಒಳ ಹರಿವು ಹೆಚ್ಚಾಗುವ ಸಾಧ್ಯತೆಗಳಿರುತ್ತದೆ. ಪ್ರಯುಕ್ತ ನಗರ ಮತ್ತು ಗ್ರಾಮದ ಹಳ್ಳ, ಕೆರೆ, ನದಿಯ ದಡಕ್ಕೆ ಹತ್ತಿಕೊಂಡಿರುವ ಗ್ರಾಮಗಳ ಗ್ರಾಮಸ್ಥರು ನದಿಗೆ ಇಳಿಯದಂತೆ ಹಾಗೂ ಜಾನುವಾರುಗಳನ್ನು ನದಿಯ ದಡದಿಂದ ಹಾದು ಹೋಗದಂತೆ ಮುನ್ನೆಚ್ಚರಿಕೆ ವಹಿಸಲು ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದರು.

ಶಹಾಪುರ ತಾಲೂಕಿನಲ್ಲಿ ಒಟ್ಟು 27 ಮನೆಗಳು ಮಳೆಯಿಂದ ಹಾನಿಯಾಗಿವೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.

ಮದ್ರಿಕಿ ಗ್ರಾಮದಲ್ಲಿನ ಬಾಪೂಜಿ ಕೇಂದ್ರಕ್ಕೆ ಭೇಟಿ ನೀಡಿ ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ಸಲ್ಲಿಸುತ್ತಿರುವ ಅರ್ಹ ಫಲಾನುಭವಿಗಳ ಕುರಿತು ಮಾಹಿತಿ ಪಡೆದರು.

ಫಲಾನುಭವಿಗಳಿಗೆ ಸರ್ಕಾರವೇ ಸಂದೇಶ ಕಳುಹಿಸಲಿದ್ದು, ಅಂತಹವರು ಮಾತ್ರ ನಿಗದಿತ ಕೇಂದ್ರಕ್ಕೆ, ನಿಗದಿತ ಸಮಯಕ್ಕೆ ತೆರಳಿ ಅರ್ಜಿ ಸಲ್ಲಿಸಬೇಕು ಎಂದು ಅವರು ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಯೋಜನೆಯಡಿ ನೋಂದಾಯಿಸುವ ಫಲಾನುಭವಿಯು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ ಎಂಬುದು ತಿಳಿಸಬೇಕೆಂದು ಸಂಬಂಧಿಸಿದ ಬಾಪೂಜಿ ಕೇಂದ್ರದ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಈ ಸಂದರ್ಭದಲ್ಲಿ ಶಹಾಪುರ ತಹಶೀಲ್ದಾರ ಉಮಾಕಾಂತ ಹಳ್ಳಿ ಸೇರಿದಂತೆ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.