ಮದ್ರಾಸ್ ಐ ರೋಗ ಹರಡದಂತೆ ಮುಂಜಾಗೃತೆ

ಧಾರವಾಡ,ಜು.30: ಧಾರವಾಡ ಜಿಲ್ಲೆಯಲ್ಲಿ ಅಡಿನೊ ವೈರಾಣುವಿನಿಂದ ಹರಡುವ ಮದ್ರಾಸ್ ಐ ರೋಗ ಬಾಧೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಎಲ್ಲ ವಯಸ್ಸಿನ, ಎಲ್ಲ ರೋಗದ ಜನರು ಜಿಲ್ಲಾ ಆಸ್ಪತ್ರೆಗೆ ಆಗಮಿಸುವದರಿಂದ ಇದು ಪರಸ್ಪರ ಹರಡದಂತೆ ಮುನ್ನಚರಿಕೆಯಾಗಿ ಜಿಲ್ಲಾಸ್ಪತ್ರೆ ಕ್ರಮ ವಹಿಸಿದೆ. ಜಿಲ್ಲಾ ಆಸ್ಪತ್ರೆಯ ಮುಖ್ಯ ಕಟ್ಟಡದಲ್ಲಿ ಕಣ್ಣಿನ ಚಿಕಿತ್ಸಾ ವಿಭಾಗದಲ್ಲಿ, ಮದ್ರಾಸ್ ಐ ಲಕ್ಷೀತರ, ಪೀಡಿತರ ಚಿಕಿತ್ಸೆಗಾಗಿ ಪ್ರತ್ಯೇಕ ಸಿಬ್ಬಂದಿ ಹಾಗೂ ಕೊಠಡಿ ವ್ಯವಸ್ಥೆ ಮಾಡಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ ಅವರು, ಸರಕಾರಿ ಆಸ್ಪತ್ರೆಗೆ ಮುಖ್ಯವಾಗಿ ಗ್ರಾಮೀಣ ಜನರು, ಆರ್ಥಿಕವಾಗಿ ಹಿಂದುಳಿದವರು, ಗರ್ಭಿಣಿ ಮಹಿಳೆಯರು, ಸಣ್ಣ ಮಕ್ಕಳು, ಇತರ ರೋಗಿಗಳು ಚಿಕಿತ್ಸೆಗಾಗಿ ದಿನ ನಿತ್ಯ ಆಗಮಿಸುತ್ತಾರೆ.
ಅವರಿಗೆ ಮದ್ರಾಸ್ ಐ ಕಣ್ಣಿನ ಉರಿ ಊತವಾಗಿ ಸಮಸ್ಯೆ ಆಗಬಾರದು. ಅದಕ್ಕಾಗಿ ಮದ್ರಾಸ್ ಐ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಆಗಮಿಸುವವರಿಗೆ ಪ್ರತ್ಯೇಕವಾಗಿ ನೋಂದಣಿ ಕೌಂಟರ್, ದಾಖಲಾತಿ ಕೇಂದ್ರ ಹಾಗೂ ಚಿಕಿತ್ಸಾ ಕೊಠಡಿಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮದ್ರಾಸ್ ಐ ಚಿಕಿತ್ಸೆಗೆ ಆಗಮಿಸುವರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವೈದ್ಯಕೀಯ ಸಿಬ್ಬಂದಿ, ವೈದ್ಯರನ್ನು ನೇಮಿಸಲಾಗಿದ್ದು, ರಜಾ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಾಗೂ ಉಳಿದಂತೆ ಎಲ್ಲ ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4:30 ರ ವರೆಗೆ ಚಿಕಿತ್ಸೆಗೆ ಲಭ್ಯವಿರುತ್ತಾರೆ. ಚಿಕಿತ್ಸೆ ನಂತರ ಅಲ್ಲಿಯೇ ಅಗತ್ಯ ಔ?Àಧಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ಗಾಬಿ ಅವರು ತಿಳಿಸಿದ್ದಾರೆ.
ಮದ್ರಾಸ್ ಐ ವೈರಾಣು ರೋಗ 20 ರಿಂದ 35 ವಯೋಮಾನದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಹಾಸ್ಟೆಲ್, ಪಿಜಿ ಗಳಲ್ಲಿ ವಾಸಿಸುವ ಯುವಕಯುವತಿಯರಲ್ಲಿ ಇದು ಹೆಚ್ಚು ಕಾಣುತ್ತಿದೆ. ಇಂತವರು ವಾಸ ಸ್ಥಳದಲ್ಲಿ ಇತರರೊಂದಿಗೆ ಸುರಕ್ಷಿತ ಅಂತರ, ನೈರ್ಮಲ್ಯ, ಸ್ವಚ್ಛತೆ ಕಾಪಾಡಿಕೊಂಡು, ಆಗಾಗ ಕೈ ತೋಳೆದು ಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಮದ್ರಾಸ್ ಐ ಲಕ್ಷಣ: ಹವಾಮಾನ ವೈಪರೀತ್ಯಗಳಿಂದ ಮತ್ತು ನಿರಂತರ ಮಳೆಯಿಂದಾಗಿ ಕಣ್ಣಿನಉರಿ ಊತದ ಸಮಸ್ಯೆ ಕಂಡು ಬರುತ್ತಿದೆ. ಕಣ್ಣಿನಿನ ಬಿಳಿ ಭಾಗ ಕೆಂಪಾಗುವುದು, ಕಣ್ಣುಗಳಲ್ಲಿ ಉರಿ ಮತ್ತು ಊತ ಬರುವುದು, ಕಣ್ಣುಗಳಿಂದ ನಿರಂತರವಾಗಿ ನೀರು ಬರುವುದು, ಕಣ್ಣಲ್ಲಿ ಪಿಚ್ಚು ಬರುವುದು ಮತ್ತು ಕಣ್ಣು ಊತುಕೊಳ್ಳುವುದು ಮದ್ರಾಸ್ ಐ ದ ಮುಖ್ಯ ಲಕ್ಷಣಗಳಾಗಿವೆ.
ಮದ್ರಾಸ್ ಐ ವೈರಾಣುರೋಗವಾಗಿದ್ದು, ಇದು ಗಾಳಿ ಮೂಲಕ ಹರಡುವದಿಲ್ಲ. ಸ್ವಚ್ಚತೆ ಮತ್ತು ವೈದ್ಯರ ಸಲಹೆಗಳನ್ನು ಪಾಲಿಸಿದರೆ, ರೋಗ ನಿರೋಧಕ ಶಕ್ತಿಗೆ ಅನುಗುಣವಾಗಿ 3 ರಿಂದ 6 ದಿನಗಳಲ್ಲಿ ಕಡಿಮೆ ಆಗುತ್ತದೆ. ನಿರ್ಲಕ್ಷ್ಯ ಮಾಡಿದರೆ ಕಣ್ಣಿನ ದೃಷ್ಟಿಗೆ ತೊಂದರೆ ಆಗಬಹುದು. ಮುಂಜಾಗೃತೆ ವಹಿಸಿ ನಿಮ್ಮ ಆರೋಗ್ಯದೊಂದಿಗೆ ಇತರರ ಆರೋಗ್ಯವನ್ನು ರಕ್ಷಿಸಿ ಎಂದು ಡಾ. ಸಂಗಪ್ಪ ಗಾಬಿ ಅವರು ತಿಳಿಸಿದ್ದಾರೆ.