ಮದ್ರಾಸ್ ಐ : ಭಯ ಬೇಡ-ಜಾಗೃತಿ ವಹಿಸಿ

ಕಲಬುರಗಿ,ಆ.08: ಕಣ್ಣಿಗೆ ಸಂಬಂಧಿಸಿದಂತೆ ಈಚೆಗೆ ಹೊಸದಾಗಿ ಕಾಣಿಸಿಕೊಂಡ ಮದ್ರಾಸ್ ಐ ಕಾಯಿಲೆಯ ಬಗ್ಗೆ ಭಯ ಪಡದೆ, ಮುಂಜಾಗ್ರತೆ ವಹಿಸಬೇಕು ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ’್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ‘ಮದ್ರಾಸ್ ಐ ಕಾಯಿಲೆ ಜಾಗೃತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಣ್ಣುಗಳು ಕೆಂಪಾಗುವುದು, ನೀರು ಬರುವುದು, ಕಣ್ಣುಗಳಲ್ಲಿ ಪಿಸುರು ಗಟ್ಟುವುದು, ದೃಷ್ಠಿ ಕಡಿಮೆಯಾಗುವುದು, ಬಿಸಿಲಿಗೆ ಕಣ್ಣುಗಳು ಕುಕ್ಕುವುದು, ಕಣ್ಣುಗಳನ್ನು ಬಿಡಲು ಆಗದಿರುವುದು ಇದರ ಲಕ್ಷಣಗಳಾಗಿವೆ. ಇದು 5-6 ದಿನಗಳಲ್ಲಿ ಕಡಿಮೆಯಾಗುತ್ತದೆ. ಕಣ್ಣಿನಲ್ಲಿ ನೀರು ಹರಿಯುವುದು, ಕೆಂಪಾಗುವುದು, ಕಣ್ಣು ರೆಪ್ಪೆಗಳು ಬಾತುಕೊಳ್ಳುವುದು, ವಿಪರೀತ ನೋವು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು, ಪದೇ-ಪದೇ ಕಣ್ಣುಗಳನ್ನು ಮುಟ್ಟದಿರುವುದು ಮಾಡಬೇಡಿ ಎಂದು ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ನಾಗೇಶ್ವರಿ ಮುಗಳಿವಾಡಿ, ಮಂಗಲಾ ಚಂದಾಪುರೆ, ಅರ್ಚನಾ ಸಿಂಗೆ, ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ನಾಗಮ್ಮ ಚಿಂಚೋಳಿ ಸೇರಿದಂತೆ ಇನ್ನಿತರರು ಇದ್ದರು.