ಮದ್ರಾಸ್ ಐ ಕಣ್ಣಿನ ಸೋಂಕು ಭಯ ಬೇಡ. ಮುಂಜಾಗ್ರತೆ ವಹಿಸಿದರೆ ಸಾಕು.


ಸಂಜೆವಾಣಿ ವಾರ್ತೆ
ಸಿರಿಗೇರಿ ಆ 5. ಮದ್ರಾಸ್ ಐ ಸಂಬಂಧಿತ ಈ ಕಣ್ಣಿನ ರೋಗದ ಕುರಿತು ಯಾವುದೇ ಭಯ ಬೇಡ, ಮಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಸಾಕು ಎಂದು ಸಿರುಗುಪ್ಪ ತಾಲೂಕು ವೈದ್ಯಾಧಿಕಾರಿ ಡಾ. ಈರಣ್ಣ ತಿಳಿಸಿದರು. ಇತ್ತೀಚಿಗೆ ಸಮೀಪದ ಕೊಂಚಗೇರಿ ಗ್ರಾಮದಲ್ಲಿ ನಡೆದ ಸಾಂಕ್ರಾಮಿಕ ರೋಗ ಮುಂಜಾಗ್ರತ ಕ್ರಮ  ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ, ನಮ್ಮ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ಮದ್ರಾಸ್ ಐ ಸಂಬಂಧಿತ ಸಾಂಕ್ರಾಮಿಕ ಕಣ್ಣಿನ ರೋಗ ಕಂಡುಬರುತ್ತಿದೆ. ಕಣ್ಣುಗಳಲ್ಲಿ ಒತ್ತಿದಂತಾಗುವುದು, ಚುಚ್ಚುವಂತಾಗುವುದು, ಕಣ್ಣುಗಳು ಕೆಂಪಗಾಗಿ ಪಿಚ್ಚುಗಟ್ಟಿದಂತಾಗುವುದು, ಈ ಲಕ್ಷಣಗಳು ಕಂಡು ಬಂದಲ್ಲಿ ಸಾಮಾನ್ಯ ಕಣ್ಣಿನ ಡ್ರಾಪ್ಸ್ ಗಳನ್ನು ಬಳಸುವ ಮೂಲಕ ಕಣ್ಣುಗಳ ಹಾರೈಕೆ ಮಾಡಬೇಕು. ಗಾಳಿಯಲ್ಲಿ, ಧೂಳಿನಲ್ಲಿ, ಹೊಗೆಯಲ್ಲಿ ತಿರುಗಾಡುವುದು ಮಾಡದೆ, ಆದಷ್ಟು  ಬಿಸಿ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸಿಕೊಂಡು ಕಣ್ಣಿಗೆ ಜೀರೋ ಪಾಯಿಂಟ್ ಇರುವ ಕನ್ನಡಕಗಳನ್ನು ಧರಿಸಿಕೊಂಡಿರಬೇಕು ಇದರಿಂದ ಈ ರೋಗವು ಇನ್ನೊಬ್ಬರಿಗೆ ಹರಡುವುದು ತಪ್ಪುತ್ತದೆ ಎಂದು ತಿಳಿಸಿದರು. ನಂತರ ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಮೊಹಮ್ಮದ್ ಕಾಸಿಂ ಮಾತನಾಡಿ ಸ್ವಚ್ಛತೆ ಕಾಪಾಡಿಕೊಳ್ಳುವುದು, ದೇಹವನ್ನು ಶುಚಿಯಾಗಿ ಇಟ್ಟುಕೊಳ್ಳುವ ಕುರಿತು ಮಾಹಿತಿ ನೀಡಿದರು. ನೇತ್ರ ತಜ್ಞೆ ವರಲಕ್ಷ್ಮಿ ಇವರು ಮಾತನಾಡಿ ಕಣ್ಣುಗಳ ಮಹತ್ವವನ್ನು ತಿಳಿಸಿ ಕಣ್ಣುಗಳ ಹಾರೈಕೆ ಮತ್ತು ಸೋಂಕು ಆಧಾರಿತ ರೋಗಗಳು ಬಂದಾಗ ಕೈಗೊಳ್ಳುವ ಮುಂಜಾಗ್ರತಾ ಕ್ರಮವನ್ನು, ಚಿಕಿತ್ಸೆ ಮಾಡಿಕೊಳ್ಳುವ ವಿಧಾನವನ್ನು ತಿಳಿಸಿಕೊಟ್ಟರು. ಇದೆ ವೇಳೆ ತಮ್ಮ ಗ್ರಾಮದಲ್ಲಿ ಆರೋಗ್ಯ ಸಂಬಂಧಿತ ಮುಂಜಾಗ್ರತ ಕ್ರಮಗಳ ಕಾರ್ಯಕ್ರಮಗಳನ್ನು ನಡೆಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಣಂ ಸಿದ್ದನಗೌಡ ಇವರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಚನ್ನಬಸವನಗೌಡ, ಗ್ರಾ. ಪಂ. ಸದಸ್ಯರು, ವೈದ್ಯಧಿಕಾರಿ ತಿಪ್ಪೇಸ್ವಾಮಿರೆಡ್ಡಿ, ಸಹಾಯಕ ಆರೋಗ್ಯ ಅಧಿಕಾರಿ ನಾಗೇಶ್, ಪಿ ಎಚ್ ಸಿ ಓ ಗಂಗಮ್ಮ, ಕೆ ಎಚ್ ಪಿ ಟಿ ವೀರೇಶ್, ಸಿದ್ದರಾಂಪುರ ದಾಸಾಪುರ ಮತ್ತು ಕೊಂಚ್ಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತರು, ವಿದ್ಯಾರ್ಥಿಗಳು ಇದ್ದರು.