ಮದ್ರಸಕ್ಕೆ ಹೋಗುತ್ತಿದ್ದ ಬಾಲಕಿಯ  ಎತ್ತಿ ನೆಲಕ್ಕೆ ಎಸೆದ ದುಷ್ಕರ್ಮಿ!


ಕಾಸರಗೋಡು, ನ.೧೮- ಮದ್ರಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಸಹಪಾಠಿಗಳ ಮುಂದೆಯೇ ವ್ಯಕ್ತಿಯೋರ್ವ ಮೇಲಕ್ಕೆತ್ತಿ ನೆಲಕ್ಕೆ ಎಸೆದ ಅಮಾನವೀಯ ಘಟನೆ ಮಂಜೇಶ್ವರದ ಉದ್ಯಾವರ ಸಮೀಪ ನಡೆದಿದೆ. ಘಟನೆಗೆ ಸಂಬಂಧಿಸಿದ ಸಿಸಿ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿ ವಿರುದ್ಧ ಆಕ್ರೋಶ ಬುಗಿಲೆದ್ದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಕುಂಜತ್ತೂರಿನ ಅಬೂಬಕ್ಕರ್ ಸಿದ್ದಿಕ್ (೩೦) ಎಂಬಾತನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡಿರುವ ೯ರ ಹರೆಯದ ಬಾಲಕಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮದ್ರಸಕ್ಕೆ ತೆರಳುತ್ತಿದ್ದ ಬಾಲಕಿಯ ಹತ್ತಿರ ಬಂದ ಈತ ಬಾಲಕಿಯನ್ನು ಮೇಲಕ್ಕೆತ್ತಿ ಎಸೆದಿದ್ದಾನೆ. ಬಾಲಕಿ ನೆಲದಿಂದ ಎದ್ದೇಳಲು ಯತ್ನಿಸಿದರೂ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೃತ್ಯದ ಬಳಿಕ ಆರೋಪಿ ಅಲ್ಲಿಂದ ತೆರಳಿದ್ದನು. ಬಾಲಕಿಯ ಪೋಷಕರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯನ್ನು ರಾಜ್ಯ ಸರಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ.