ಮದ್ಯ ಹಗರಣ: ಮನೀಶ್‌ಗೆ ಜಾಮೀನು ನಕಾರ

ನವದೆಹಲಿ, ಮೇ.೩೦- ದೆಹಲಿ ಸರ್ಕಾರದ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
೨೦೨೧-೨೨ರ ಅಬಕಾರಿ ನೀತಿಯ ಅನುಷ್ಠಾನದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಸಿಬಿಐ ಆಮ್ ಆದ್ಮಿ ಪಕ್ಷದ ನಾಯಕನ್ನು ಬಂಧಿಸಿತ್ತು.
ಹಲವು ತಿಂಗಳಿನಿಂದ ಜೈಲಿನಲ್ಲಿರುವ ಮನೀಶ್ ಸಿಸೋಡಿಯಾ ಅವರು ದೆಹಲಿ ಹೈಕೋರ್ಟ್ ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದ್ದು ಈ ಮೂಲಕ ಸಿಸೋಡಿಯಾ ಆಘಾತ ಎದುರಿಸುವಂತಾಗಿದೆ.
ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ಮೇ ೧೧ ರಂದು ಕಾಯ್ದಿರಿಸಿದ ತೀರ್ಪಿನ ಆದೇಶವನ್ನು ಇಂದು ಪ್ರಕಟಿಸಿದರು, ಸಿಸೋಡಿಯಾ ಪ್ರಸ್ತುತ ಸಿಬಿಐ ಮತ್ತು ಇಡಿ ದಾಖಲಿಸಿದ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮಾರ್ಚ್ ೩೧ ರಂದು ಸಿಬಿಐ ಪ್ರಕರಣದಲ್ಲಿ ವಿಶೇಷ ನ್ಯಾಯಾಧೀಶರು ಅವರಿಗೆ ಜಾಮೀನು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ತೀರ್ಪು ಪ್ರಕಟಿಸುವಾಗ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು, ಆರೋಪ ಗಂಭೀರವಾಗಿದೆ ಅಲ್ಲದೆ “ಆರೋಪಿ ಸಾರ್ವಜನಿಕ ಸೇವಕ. ಅಬಕಾರಿ ನೀತಿ ಅಥವಾ ಸರ್ಕಾರದ ಅಧಿಕಾರ ಪರಿಶೀಲಿಸಿಲ್ಲ. ಆದರೆ ಅರ್ಜಿದಾರರು ಪ್ರಬಲ ವ್ಯಕ್ತಿಯಾಗಿದ್ದರೂ, ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ” ಎಂದು ಹೇಳಿ ಜಾಮೀನು ನೀಡಲು ನಿರಾಕರಿದ್ದಾರೆ.
ಸಿಸೋಡಿಯಾ ಅವರು ತಮ್ಮ ಜಾಮೀನು ಅರ್ಜಿಯಲ್ಲಿ, ಆಪಾದಿತ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಸಿಬಿಐನಿಂದ ಹಣದ ಜಾಡು ಹಿಡಿದಿರುವ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಮತ್ತು ಅವರ ವಿರುದ್ಧದ ಆರೋಪಗಳು “ಸಂಭವನೀಯ ಕ್ಷೇತ್ರದಲ್ಲಿದೆ”ಹೀಗಾಗಿ ಜಾಮೀನು ನೀಡುವಂತೆ ಮನವಿ ಮಾಡಿದ್ದರು.