ಮದ್ಯ ವ್ಯಾಪಾರಿ ರೈಲ್ವೆ ನಿಲ್ದಾಣದಲ್ಲಿ ಸೆರೆ

ಬೆಂಗಳೂರು, ಮೇ.೩೦- ಹೆಚ್ಚಿನ ಹಣ ಸಂಪಾದನೆ ಮಾಡಲು ಅಕ್ರಮವಾಗಿ ಮದ್ಯ ಸಾಗಿಸಿ, ಮಾರಾಟಕ್ಕೆ ಮುಂದಾಗಿದ್ದ ವ್ಯಾಪಾರಿ ಒಬ್ಬ ನಗರದ ರೈಲ್ವೆ ನಿಲ್ದಾಣದಲ್ಲಿಯೇ ಸಿಕ್ಕಿ ಬಿದ್ದಿದ್ದಾನೆ.
ಪಶ್ಚಿಮ ಬಂಗಾಳ ಮೂಲದ ಪ್ರಯಾಣಿಕ ಸುಕಂತ ದಾಸ್(೩೬) ಬಂಧಿತ ವ್ಯಾಪಾರಿ ಆಗಿದ್ದು, ಈತನಿಂದ ನಾಲ್ಕು ಚೀಲಗಳಲ್ಲಿದ್ದ ೭೭ ಮದ್ಯದ ಬಾಟಲಿಗಳನ್ನು ದಂಡು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡು ಮದ್ಯವನ್ನು ಅಬಕಾರಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಶನಿವಾರ ಮುಂಜಾನೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮತ್ತು ಕಾನ್ಸ್?ಟೇಬಲ್?? ರಾಕೇಶ್ ಮೌರ್ಯ ಬೆಂಗಳೂರು ಕಂಟೋನ್ಮೆಂಟ್‌ನ ಪ್ಲಾಟ್‌ಫಾರ್ಮ್ ಸಂಖ್ಯೆ ೦೨ರಲ್ಲಿ ೪ ಚೀಲಗಳನ್ನು ನೋಡಿ ಅನುಮಾನಗೊಂಡು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಸುಕಂತ ದಾಸ್, ಕೇರಳ ರಾಜ್ಯದಲ್ಲಿ ಇದನ್ನು ಅಕ್ರಮವಾಗಿ ಹೆಚ್ಚಿನ ದರದಲ್ಲಿ ಮಾರಲು, ಜಕ್ಕೂರಿನಲ್ಲಿರುವ ಮದ್ಯದಂಗಡಿಯಲ್ಲಿ ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ತಿರುವನಂತಪುರ ಸೆಂಟ್ರಲ್‌ಗೆ ಹೋಗುವ ಐಲ್ಯಾಂಡ್ ಎಕ್ಸ್‌ಪ್ರೆಸ್ ಹತ್ತಲು ಚೀಲಗಳನ್ನು ಹಿಡಿದು ಹೊರಟಿದ್ದ.ಯಾವುದೇ ಸರಿಯಾದ ಬಿಲ್ ಇಲ್ಲದ ಚೀಲಗಳನ್ನು ದಂಡು ನಿಲ್ದಾಣದ ರೈಲ್ವೆ ಪೊಲೀಸರು ಪರಿಶೀಲಿಸಲು ಮುಂದಾದಾಗ ಬೇರೆ ಬೇರೆ ಬ್ರ್ಯಾಂಡ್‌ನ ಮದ್ಯ ಪತ್ತೆಯಾಗಿದೆ.
ಸುಮಾರು ೨೬,೪೩೩ ರೂ. ಮೌಲ್ಯದ ಒಟ್ಟು ೭೭ ಬಾಟಲ್??ಗಳನ್ನು ಜಪ್ತಿ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ರಾಜ್ಯ ಅಬಕಾರಿ ಇಲಾಖೆಗೆ ರೈಲ್ವೆ ಪೊಲೀಸರು ಹಸ್ತಾಂತರಿಸಿದ್ದಾರೆ.