ಮದ್ಯ ವ್ಯಸನಿಗಳಾಗದೇ ಗುಣಶೀಲರಾದರೆ ಘನತೆ ಹೆಚ್ಚಲಿದೆ

ದಾವಣಗೆರೆ.ಜೂ.೩ : ಮದ್ಯ ವ್ಯಸನಿಗಳಾಗದೇ ಗುಣಶೀಲರಾದರೆ ಆರೋಗ್ಯಕರ ಬದುಕು ಕಂಡುಕೊಳ್ಳಬಹುದು ಎಂದು ಜಿಲ್ಲಾ ಬಿಜೆಪಿ ಯುವ ಮುಖಂಡ, ಉದ್ಯಮಿ ಜಿ.ಎಸ್. ಶ್ಯಾಮ್ ತಿಳಿಸಿದರು.ಅವರು, ಶುಕ್ರವಾರ ತಾಲ್ಲೂಕಿನ ಅಣಜಿ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ದಾವಣಗೆರೆ ಜಿಲ್ಲಾ ಜನ ಜಾಗೃತಿ ವೇದಿಕೆ, ಮದ್ಯ ವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಣಜಿ ವಲಯ, ಗ್ರಾಮ ಪಂಚಾಯಿತಿ ಅಣಜಿ, ಪೋಲಿಸ್ ಇಲಾಖೆ ಅಣಜಿ, ಅಣಜಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ಥಳೀಯ ಸಂಘ ಸಂಸ್ಥೆಗಳು, ಊರಿನ ದಾನಿಗಳು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ 1662ನೇ ಮದ್ಯ ವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಮದ್ಯ ಸೇವನೆ ಆರೋಗ್ಯದ ಜೊತೆಗೆ ಜೀವ ಮತ್ತು ಜೀವನಕ್ಕೆ ಮಾರಕ. ಅಲ್ಲದೇ ಕುಟುಂಬಕ್ಕೂ ಅಗೌರವ ಸೂಚಿಸುವುದು. ಹೀಗೆ ಮದ್ಯ ಸೇವನೆಗೆ ಹಣ ವ್ಯಯಿಸುವ ಬದಲಿಗೆ ಅದನ್ನೇ ಸಾಮಾಜಿಕ ಸೇವಾ ಕಾರ್ಯಕ್ಕೆ ವಿನಿಯೋಗಿಸಿದರೆ ಸಾರ್ಥಕತೆ ಕಾಣಲಿದೆ. ಅಲ್ಲದೇ ಕುಟುಂಬದ ಏಳಿಗೆಗಾದರೂ ವಿನಿಯೋಗಿಸಿದರೆ ಉಪಯುಕ್ತವಾಗಲಿದೆ. ಹಾಗಾಗಿ ಮದ್ಯ ತ್ಯಜಿಸಿ ಗುಣಶೀಲರಾಗಬೇಕೆಂದರು. ನಮ್ಮ ಆರೋಗ್ಯವನ್ನ ನಾವೇ ಕಾಪಾಡಿಕೊಳ್ಳಬೇಕು. ಯಾವುದೇ ಸರ್ಕಾರ ಏನೇ ನೀಡಿದರೂ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ದುಡಿದರಷ್ಟೇ ಬದುಕು ಹಸನಾಗಲು ಸಾಧ್ಯ ಎಂದರು.ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮತ್ತು ಕುಟುಂಬ ನಿರ್ವಹಣೆಗಾಗಿ ಸಹಾಯ ಹಸ್ತ ಚಾಚುತ್ತಿರುವುದು ಹಾಗೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಅಂತೆಯೇ ಮದ್ಯ ವ್ಯಸನದಿಂದ ದೂರ ಉಳಿಸುವ ಸಲುವಾಗಿ ಮದ್ಯವರ್ಜನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಜನ ಜಾಗೃತಿಗೊಳಿಸುತ್ತಿರುವುದು ಪ್ರಶಂಸನಾರ್ಹ ಎಂದರು.ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್,  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕ ವಿಜಯಕುಮಾರ್ ನಾಗನಾಳ್, ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಿಂಗನಗೌಡ ನೆಗಳೂರು, ಸಿದ್ದಯ್ಯ, ಬಿ. ಬಸವಲಿಂಗಪ್ಪ, ಕೆ. ಮಂಜುನಾಥ್, ಬಿ. ದಾನಪ್ಪ, ಸಂಗನ್ ಬಸಪ್ಪ, ಚಂದ್ರಶೇಖರ ಕೊಂಡಜ್ಜಿ, ವಿರುಪಾಕ್ಷ, ಮರಿಯಾಚಾರ್, ಕೆ. ಹೆಚ್. ಚಂದ್ರಪ್ಪ, ಮಲ್ಲಪ್ಪ ಮೇಸ್ಟ್ರು, ಕೊಟ್ರೇಶ್, ಯಶೋಧಮ್ಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು, ಇತರರು ಇದ್ದರು.