ಮದ್ಯ ಮಾರಾಟ ನಿಗ್ರಹಕ್ಕೆ ಪ್ರತಿಭಟನೆಗೆ ನಿರ್ಧಾರ

ಕೋಲಾರ, ಜು. 25: ರಾಷ್ಟ್ರೀಯ ಹೆದ್ದಾರಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಲ್ಲಿ ವಿಫಲವಾಗಿರುವ ಅಬಕಾರಿ ಇಲಾಖೆಯ ಮಹಿಳಾ ವಿರೋಧಿ ನೀತಿಯನ್ನು ಖಂಡಿಸಿ ಜು.೨೮ರ ಗುರುವಾರ ಪೊರಕೆಗಳ ಸಮೇತ ಅಬಕಾರಿ ಇಲಾಖೆ ಆಯುಕ್ತರ ಕಚೇರಿ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮಹಿಳಾ ರೈತಸಂಘದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಸರ್ಕಾರ ನಡೆಯಬೇಕಾದರೆ ಅಬಕಾರಿ ಮಾರಾಟ ಹೆಚ್ಚಾಗಬೇಕು. ಮಾರಾಟ ಹೆಚ್ಚಾಗಬೇಕಾದರೆ ಕಾನೂನು ಬಾಹಿರ ಗ್ರಾಮೀಣ ಪ್ರದೇಶಗಳಲ್ಲಿ ಗಲ್ಲಿ ಗಲ್ಲಿಯಲ್ಲೂ ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮ ಮಾರಾಟದ ದಂಧೆಯಿಂದ ಹಳ್ಳಿಗಳಲ್ಲಿ ಮರ್ಯಾದಸ್ತ ಕುಟುಂಬಗಳು ಸ್ವಾಭಿಮಾನದಿಂದ ಬದುಕಲು ಆಗುತ್ತಿಲ್ಲವೆಂದು ಅಬಕಾರಿ ಇಲಾಖೆ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎರಡು ವರ್ಷಗಳಿಂದ ಕೊರೊನಾ ಹಾವಳಿಗೆ ತುತ್ತಾಗಿ ದುಡಿಯುವ ಕೈಗೆ ಕೆಲಸವಿಲ್ಲದೆ ತತ್ತರಿಸಿದ್ದ ಗ್ರಾಮೀಣ ಪ್ರದೇಶದ ಮಹಿಳೆಯರು ಧರ್ಮಸ್ಥಳ ಸಂಘ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಕುಟುಂಬ ನಿರ್ವಹಣೆ ಮಕ್ಕಳ ವಿದ್ಯಾಭ್ಯಾಸ, ಹಿರಿಯರ ಆರೋಗ್ಯಕ್ಕೆ ಸಾಲ ಮಾಡಿ ಸಾಲ ತೀರಿಸಬೇಕಾದ ಮನೆ ಯಜಮಾನ ಬೆಳಗ್ಗೆಯಿಂದ ಸಾಯಂಕಾಲ ಕೂಲಿ ಮಾಡಿ ಸಂಪಾದಿಸುವ ೫೦೦ರೂಪಾಯಿಯನ್ನು ಸಂಜೆ ಮದ್ಯದಂಗಡಿಗೆ ದುಡಿದ ದುಡಿಮೆಯಲ್ಲಿ ಕುಡಿದು ಸಾಯಂಕಾಲ ಮನೆಗೆ ಬಂದು ಮಕ್ಕಳ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುವ ಮಟ್ಟಕ್ಕೆ ಅಕ್ರಮ ಮದ್ಯ ಮಾರಾಟ ದಂಧೆ ನಡೆಯುತ್ತಿದೆ ಎಂದು ಆರೋಪ ಮಾಡಿದರು.
ಕಿಲೋಮೀಟರ್ ಗಟ್ಟಲೇ ಅಲೆದಾಡಿದರೂ ಹನಿ ನೀರು ಸಿಗುವುದಿಲ್ಲ. ಆದರೆ, ಅಬಕಾರಿ ಅಧಿಕಾರಿಗಳಿಂದ ಪ್ರತಿ ಹಳ್ಳಿ, ರಾಷ್ಟ್ರೀಯ ಹೆದ್ದಾರಿಗಳಲ್ಲೂ ರಾತ್ರಿ ೧೨ ಗಂಟೆಯಿಂದ ದಿನದ ೨೪ ಗಂಟೆ ಮದ್ಯ ಮಾರಾಟ ನಡೆಯುತ್ತದೆ. ಈ ದಂಧೆಗೆ ಪ್ರತಿ ಮದ್ಯದಂಗಡಿಯಿಂದ ೨೨ ಸಾವಿರ, ಗ್ರಾಮೀಣ ಪ್ರದೇಶದ ಅಂಗಡಿ, ರಾಷ್ಟ್ರೀಯ ಹೆದ್ದಾರಿ ಡಾಬಾಗಳಿಂದ ೧೦ ಸಾವಿರ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಂಗಳಿಗೆ ಸೇರುತ್ತದೆ ಎಂದು ಭ್ರಷ್ಟಾಚಾರದ ವಿರುದ್ಧ ಆರೋಪ ಮಾಡಿದರು.
ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಅಕ್ರಮ ಮದ್ಯ ಮಾರಾಟದ ವಿರುದ್ಧ ಸ್ಥಳೀಯ ಶಾಸಕರಿಗೆ ಮಹಿಳೆಯರು ಘೇರಾವ್ ಹಾಕಿ ಹಳ್ಳಿಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಿ ಬಡವರ ಅನ್ನ ಹಾಗೂ ಮಾಂಗಲ್ಯವನ್ನು ಉಳಿಸಿ ಎಂದು ಕಣ್ಣೀರಿನಿಂದ ಮನವಿ ಮಾಡಿದರೂ ಕನಿಷ್ಠಪಕ್ಷ ಸೌಜನ್ಯಕ್ಕಾದರೂ ಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡದೆ ಶಾಸಕರೇ ಅಕ್ರಮ ಮದ್ಯ ಮಾರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಆರೋಪ ಮಾಡಿದರು.
ಗ್ರಾಮೀಣ ಪ್ರದೇಶದ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಕ್ರಮ ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರೆ ಹತ್ತಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇರೆಗೆ ಕೆಲಸ ಮಾಡುತ್ತಿರುವ ಸಿಬ್ಬಂದಿ ದೂರು ನೀಡಿದ ೧೦ ಸೆಕೆಂಡಿನಲ್ಲಿ ದಂಧೆ ಕೋರರಿಗೆ ಮಾಹಿತಿ ನೀಡಿ, ಯಾವುದೇ ಅಕ್ರಮ ಮದ್ಯ ಮಾರಾಟವಿಲ್ಲವೆಂದು ಅಧಿಕಾರಿಗಳು ಕೈತೊಳೆದುಕೊಳ್ಳುವ ಮಟ್ಟಕ್ಕೆ ಇಲಾಖೆ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
೨೪ ಗಂಟೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ದಂಧೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಗ್ರಾಮೀಣ ಪ್ರದೇಶದ ಬಡವರ ಮಾಂಗಲ್ಯವನ್ನು ಉಳಿಸಬೇಕೆಂದು ಮೇಲ್ಕಂಡ ದಿನಾಂಕದಂದು ಪೊರಕೆಗಳ ಸಮೇತ ಕೋಲಾರ ಅಬಕಾರಿ ಆಯುಕ್ತರ ಕಚೇರಿ ಮುತ್ತಿಗೆ ಹಾಕುವ ಹೋರಾಟಕ್ಕೆ ನೊಂದುಬೆಂದಿರುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಶಾಂತಮ್ಮ, ರಾಮಕ್ಕ., ವೆಂಕಟಮ್ಮ, ಸುಗುಣಮ್ಮ, ಗಿರಿಜಮ್ಮ, ಸುನಂದಮ್ಮ, ಭಾರತಿ ಈಶ್ವರಮ್ಮ ಮುಂತಾದವರಿದ್ದರು.