ಮದ್ಯ ನೀತಿ ಕೇಜ್ರಿಗೆ ಸಂಕಷ್ಟ

ನವದೆಹಲಿ,ಅ.೩೧- ರಾಷ್ಟ್ರ ರಾಜಧಾನಿ ದೆಹಲಿಯ ಮದ್ಯನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಇದೀಗ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೋಟೀಸ್ ಜಾರಿ ಮಾಡಿ ನವಂಬರ್ ೨ ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ, ಕಳೆದ ವರ್ಷ ಆಗಸ್ಟ್ ೧೭ ರಂದು ಜಾರಿ ನಿರ್ದೇಶನಾಲಯ ಸಲ್ಲಿಸಿದ ಪ್ರಥಮ ಮಾಹಿತಿ ವರದಿ- ಎಫ್‌ಐಆರ್ ನಲ್ಲಿ ಅರವಿಂಗದ ಕೇಜ್ರಿವಾಲ್ ಅವರನ್ನು ಆರೋಪಿ ಎಂದು ಹೆಸರಿಸದಿದ್ದರೂ, ಏಪ್ರಿಲ್‌ನಲ್ಲಿ, ಕೇಂದ್ರೀಯ ತನಿಖಾ ದಳ ಇದೇ ವಿಷಯದ ಕುರಿತು ವಿಚಾರಣೆ ನಡೆಸಿತ್ತು.ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ನೋಟೀಸ್ ನೀಡಿರುವ ಕ್ರಮವನ್ನು ಎಎಪಿ ತೀವ್ರವಾಗಿ ಖಂಡಿಸಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಎಪಿ ಹಿರಿಯ ನಾಯಕ ಸೌರಬ್ ಭಾರದ್ವಜ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ “ಕೇಂದ್ರ ಸರ್ಕಾರ ಉದ್ದೇಶ ಒಂದೆ. ಯಾವುದೇ ರೀತಿ ಎಲ್ಲಾದರೂ ಆಮ್ ಆದ್ಮಿ ಪಕ್ಷ ನಾಶಮಾಡುವುದೇ ಆಗಿದೆ ಎಂದಿದ್ದಾರೆ.
ಇದಕ್ಕಾಗಿ ಏನು ಬೇಕಾದರೂ ಅವರು ಮಾಡಲು ಸಿದ್ದರಿದ್ದಾರೆ. ನಕಲಿ ಪ್ರಕರಣ ಸೃಷ್ಠಿ ಮಾಡುವುದು ಸೇರಿದಂತೆ ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸುವ ಮತ್ತು ಆಮ್ ಆದ್ಮಿ ಪಕ್ಷವನ್ನು ನಾಶಮಾಡುವ ಗುರಿ ಹೊಂದಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜಿ ಉಪ ಮನೀಷ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಕೆಲವೇ ಗಂಟೆಗಳ ನಂತರ ಮುಖ್ಯಮಂತ್ರಿ ಅರವಿಂzದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮಸ್ಯೆ ಜಾರಿ ಮಾಡಿದೆ. ಮದ್ಯ ನೀತಿ ಪ್ರಕರಣದಲ್ಲಿ ೩೩೮ ಕೋಟಿ ಹಣದ ಜಾಡು ಹಿಡಿದು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಇದೀಗ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ನೋಟೀಸ್ ಜಾರಿ ಮಾಡಿ ನವಂಬರ್ ೨ ರಂದು ದೆಹಲಿಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.