ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ: ೧೦೦ಕ್ಕೂ ಅಧಿಕ ಮಂದಿ ವಶ

ಮಂಗಳೂರು, ಜ.೫- ನಗರದ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ವೇಳೆ ಅನಗತ್ಯವಾಗಿ ಸಂಚರಿಸುವವರು ಮತ್ತು ಮದ್ಯಪಾನಗೈದು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವವರಿಗೆ ನೂತನ ಪೊಲೀಸ್ ಆಯುಕ್ತ ಶಶಿಕುಮಾರ್ ನೇತೃತ್ವದಲ್ಲಿ ರವಿವಾರ ರಾತ್ರಿಯಿಂದ ಕಾರ್ಯಾಚರಣೆ (ಏರಿಯಾ ಡಾಮಿ ನೇಶನ್) ಆರಂಭಿಸಲಾಗಿದೆ.
ಅದರಂತೆ ಮೊದಲ ರಾತ್ರಿ ನೂರಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಗರದ ಬರ್ಕೆ ಮತ್ತು ಪಾಂಡೇಶ್ವರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಮೈದಾನ, ಪಾರ್ಕ್, ಸಾರ್ವಜನಿಕ ರಸ್ತೆ ಮತ್ತಿತರ ಕಡ ಅಲೆದಾಡುತ್ತಿದ್ದವರನ್ನು, ಮದ್ಯಪಾನ, ಧೂಮಪಾನ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ಮುಚ್ಚಳಿಕೆ ಬರೆಯಿಸಿ, ಮನೆಯವರನ್ನು ಕರೆಯಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಅದಕ್ಕೂ ಮುನ್ನ ಪ್ರತಿಯೊಬ್ಬರ ವಿಳಾಸ, ಸಂಪರ್ಕ ಸಂಖ್ಯೆಗಳನ್ನು ದಾಖಲಿಸಿಕೊಳ್ಳಲಾಯಿತು. ಕತ್ತಲು ಕವಿದ ಪ್ರದೇಶದಲ್ಲಿ ಅನಾವಶ್ಯಕವಾಗಿ ತಿರುಗಾಡುವ ಜನರನ್ನು ಕರೆದೊಯ್ದು ವಿಚಾರಣೆ ನಡೆಸುವುದು ಈ ಕಾರ್ಯಾಚರನೆಯ ಉದ್ದೇಶವಾಗಿದೆ. ಮುಖ್ಯವಾಗಿ ಪಾರ್ಕು, ಬಸ್ ನಿಲ್ದಾಣ, ರೈಲು ನಿಲ್ದಾಣ, ಕ್ರೀಡಾಂಗಣ ಇತ್ಯಾದಿ ತಾಣಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಲಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್ ಹಾಗೂ ಸಂಚಾರ ಮತ್ತು ಅಪರಾಧ ನಿಯಂತ್ರಣ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರ ವಶಕ್ಕೊಳಗಾದವರಿಗೆ ಡಿಎಆರ್ ಕಚೇರಿಯಲ್ಲಿ ಆಯುಕ್ತ ಶಶಿಕುಮಾರ್ ತಡರಾತ್ರಿಯೇ ಹಿತವಚನ ನೀಡಿದರು. ಅಲ್ಲದೆ ‘ಪ್ರತಿಯೊಬ್ಬರ ಪೊಟೋ, ವೀಡಿಯೋ ಮಾಡಲಾಗಿದೆ. ಇನ್ನೊಮ್ಮೆ ಈ ರೀತಿ ಸಿಕ್ಕಿದರೆ ಪ್ರಕರಣ ದಾಖಲಿಸಿಕೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ಹಲವರು ಮದ್ಯದ ನಶೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಕಾರ್ಯಾಚರಣೆ ವೇಳೆ ೧೩ ಮಂದಿ ಮಂಗಳಮುಖಿಯರು ಕೂಡ ಕಂಡು ಬಂದಿದ್ದು ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಮಂಗಳಮುಖಿಯರಿಗೆ ಸಾರ್ವಜನಿಕರಿಂದ, ಸಾರ್ವಜನಿಕರಿಗೆ ಮಂಗಳಮುಖಿಯರಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ಮಂಗಳ ಮುಖಿಯರ ಸಂಘದ ಪದಾಧಿಕಾರಿಗಳಿಗೂ ಸೂಚನೆ ನೀಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಬರ್ಕೆ ಮತ್ತು ಪಾಂಡೇಶ್ವರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರವಿವಾರ ಕಾರ್ಯಾಚರಣೆ ನಡೆಸಲಾಗಿದೆ. ಮೊದಲ ದಿನ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿಯೂ ಇಂತಹ ಕಾರ್ಯಾಚರಣೆ ನಡೆಸಲಾಗುವುದು. ರಾತ್ರಿ ೯-೧೦ ಗಂಟೆಯ ಅನಂತರ ಸಾರ್ವಜನಿಕ ಸ್ಥಳಗಳಲ್ಲಿ ಅನಾವಶ್ಯಕವಾಗಿ ಕಂಡು ಬರುವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.