ಮದ್ಯದಂಗಡಿ ತೆರೆಯಲು ಗ್ರಾಮಸ್ಥರ ವಿರೋಧ: ಪ್ರತಿಭಟನೆ

ಚಾಮರಾಜನಗರ, ಸೆ.14:- ತಾಲೂಕಿನ ಕುಲಗಾಣ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡದಂತೆ ಒತ್ತಾಯಿಸಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕುಲಗಾಣ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಸಿದ್ದತೆ ನಡೆಸಿದ ಸ್ಥಳಕ್ಕೆ ಜಮಾಯಿಸಿದ ಗ್ರಾಮಸ್ಥರು ಅಬಕಾರಿ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದರು. ನಂತರ ಮಾತನಾಡಿದ ಪ್ರತಿಭಟನಾಕಾರರು, ಹರವೆ ಹೋಬಳಿ ವ್ಯಾಪ್ತಿಗೆ ಬರುವ ಕುಲಗಾಣ ಗ್ರಾಮದಲ್ಲಿ ಬಡವರು, ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸ ಮಾಡುತ್ತಿದ್ದು, ಅಧಿಕ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಪ್ರತಿನಿತ್ಯ ಕೂಲಿ ಮಾಡಿ ಜೀವನ ನಡೆಸುವ ಪರಿಸ್ಥಿತಿ ಇದೆ. ಹೀಗಿರುವಾಗ ಮದ್ಯದಂಗಡಿ ತೆರೆಯಲು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಅತೀ ಸೂಕ್ಷ್ಮ ಪ್ರದೇಶವೆಂದು ಪೆÇಲೀಸ್ ಇಲಾಖೆ ವಿಶೇಷ ನಿಗಾ ವಹಿಸುತ್ತಿದೆ. ಈ ಮಧ್ಯೆ ಮದ್ಯ ಮಾರಾಟದ ಮಳಿಗೆ ತೆರೆಯುವುದರಿಂದ ಸಹಜವಾಗಿ ಜನ ಸಾಮಾನ್ಯರು ದುಶ್ಚಟಗಳಿಗೆ ಒಳಗಾಗುತ್ತಾರೆ. ಇದರಿಂದ ಜನರ ಕುಟುಂಬ ನಿರ್ವಹಣೆಯ ಜೊತೆಗೆ ಮಕ್ಕಳ ಶಿಕ್ಷಣ ಮತ್ತು ಬೆಳವಣಿಗೆಗೆ ತೊಂದರೆಯಾಗುತ್ತದೆ. ಇದನ್ನು ಮನಗಂಡು ಕುಲಗಾಣ ಗ್ರಾಮದ ಯಜಮಾನರು, ಮಹಿಳಾ ಸ್ವ-ಸಹಾಯ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಮದ್ಯದಂಗಡಿ ತೆರೆಯದಂತೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರೂ ಕೂಡ ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಗಮನಕ್ಕೆ ಬಾರದೆ ಸ್ಥಳ ಪರಿಶೀಲನೆ ನಡೆಸಿ ಮದ್ಯ ಮಾರಾಟ ಘಟಕ ಆರಂಭಕ್ಕೆ ಅನುಮತಿ ನೀಡಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ದೂರಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಎಂಎಸ್‍ಐಎಲ್ ಸೇರಿದಂತೆ ಯಾವುದೇ ಮದ್ಯ ಮಾರಾಟ ಮಳಿಗೆ ತೆರೆಯಲು ಇಲಾಖೆ ಅನುಮತಿ ನೀಡಬಾರದು. ಅದಾಗ್ಯೂ ಅನುಮತಿ ಕೊಟ್ಟರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲ ಒಗ್ಗೂಡಿ ಜಿಲ್ಲಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಚಾಮರಾಜನಗರ ವಲಯ ಅಬಕಾರಿ ನಿರೀಕ್ಷಕರಾದ ಮೀನಾ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಚೂಡಾ ಮಾಜಿ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ, ಗ್ರಾಪಂ ಅಧ್ಯಕ್ಷೆ ಸಿ.ಪ್ರಮೀಳಾ ಮಹದೇವಯ್ಯ, ಸದಸ್ಯರಾದ ಪ್ರಭುಸ್ವಾಮಿ, ಮಹೇಂದ್ರ ಅರಳೀಕಟ್ಟೆ. ಮಾಜಿ ಅಧ್ಯಕ್ಷ ಕೆ.ಸಿ.ಲಿಂಗಪ್ಪ, ಗುರುಸ್ವಾಮಿ ಹಿರೆಬೇಗೂರು, ಮಾಜಿ ಸದಸ್ಯರಾದ ಬಸವರಾಜಪ್ಪ, ಕೆ.ಸಿ. ಮಹದೇವಯ್ಯ, ಮುಖಂಡರಾದ ಗೌಡಿಕೆ ನಾಗರಾಜಪ್ಪ, ಪಿ.ಸಿ.ನಟರಾಜು, ನಂಜಪ್ಪ, ಶಿವಸ್ವಾಮಿ, ಶಿವಾರ್ಚಕ ಬಸವಣ್ಣ, ಪುಟ್ಟಪ್ಪ, ಯಜಮಾನ ಬಸವಯ್ಯ, ಮಹೇಶನಾಯಕ, ಶ್ರೀನಿವಾಸ, ಚಂದ್ರಪ್ಪ, ಬಸವಣ್ಣಸ್ವಾಮಿ, ಮಹದೇವಪ್ರಸಾದ, ಸತೀಶ್, ರಾಜಶೇಖರ, ಅಶೋಕ್, ಮಹದೇವಸ್ವಾಮಿ, ಡೈರಿ ಲಿಂಗಪ್ಪ, ಮಲ್ಲಿಗಮ್ಮ, ನೀಲಮ್ಮ, ಮಂಜುಳ, ಪುಟ್ಟಮ್ಮ, ರಂಗಸ್ವಾಮಿ, ಗೋವಿಂದನಾಯಕ, ಮಹೇಂದ್ರ, ಮಹದೇವ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.