ಮದ್ಯಂತರ ಪರೀಕ್ಷೆ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ವಿಜಯಪುರ, ನ.19-ಪದವಿ ಪೂರ್ವ ಶಿಕ್ಷಣ ಇಲಾಖೆ ಮದ್ಯಂತರ ಪರೀಕ್ಷೆಯನ್ನು ನಡೆಸುವ ಆತಂಕಕಾರಿ ನಡೆಯನ್ನು ವಿರೋಧಿಸಿ ಪಿಯು ಇಲಾಖೆ ವಿರುದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗ ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಎಬಿವಿಪಿಯ ರಾಜ್ಯ ಸಹ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ ರಾಜ್ಯದ ಎಲ್ಲ ಪದವಿ ಪೂರ್ವ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಹಿತದ ವಿರುದ್ದದಲ್ಲಿ ಮದ್ಯಂತರ ತೀರ್ಮಾನ ತೆಗೆದುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ಣಯವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ.
ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಇತ್ತಿಚೆಗೆಯಷ್ಟೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮತ್ತು ಕೋವಿಡ್ ಭಯದ ಹಿನ್ನೆಲೆಯಲ್ಲಿ ಬೋಧನಾ ಕಾರ್ಯ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಸಮರ್ಪಕವಾಗಿ ನಡೆದಿರುವುದಿಲ್ಲಾ ಆದರೆ ಪಿಯು ಇಲಾಖೆಯು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ವಾಸ್ತವ ಪರಿಸ್ಥಿತಿಯನ್ನು ಅರಿಯದೆ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದರು.
ನಗರ ಸಂಘಟನಾ ಕಾರ್ಯದರ್ಶಿ ನಾಗರಾಜ ಬಟಗೇರಾ ಮಾತನಾಡಿ ಇಲಾಖೆಯಿಂದಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಏಕಕಾಲಕ್ಕೆ ಪರಿಕ್ಷೆ ನಡೆಸುವ ಜವಾಬ್ದಾರಿಯನ್ನು ತೆಗೆದುಕೊಂಡಿರುವುದರಿಂದ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪಕ್ಕೆ ಇಲಾಖೆಗೆ ಕಳುಹಿಸಿ ಅವುಗಳನ್ನು ಪಡೆದುಕೊಂಡು ಮೌಲ್ಯಮಾಪನ ಕಾರ್ಯಕ್ಕೆ ಅಧ್ಯಾಪಕರನ್ನು ತೊಡಗಿಸಿಕೊಂಡರೆ ಕೋವಿಡ್ ಪರಿಸ್ಥಿತಿಯಲ್ಲಿ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಪಾಠ ಮಾಡೋರು ಯಾರು? ಹೊಸ ನೀತಿಗಳನ್ನು ಖಂಡಿತವಾಗಿಯೂ ಜಾರಿಗೊಳಿಸಬೇಕು ಆದರೆ ಹೊಸ ಪದ್ಧತಿಯಿಂದ ವಿದ್ಯಾರ್ಥಿಗಳ ಮೇಲೆ ಯಾವ ರೀತಿಯಲ್ಲಿ ನಕಾರಾತ್ಮಕವಾದ ಪರಿಣಾಮ ಬೀಳುತ್ತೆ ಎಂಬುವುದನ್ನು ಕೂಡ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಅರ್ಥೈಸಿಕೊಳ್ಳಬೇಕಿತ್ತು.
ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಈ ಸಾಲಿನ ದ್ವಿತೀಯ ವರ್ಷದ ಮೌಲ್ಯಮಾಪನ ಕಾರ್ಯ ಮತ್ತು ಪರೀಕ್ಷೆಗಳು ಹಳೆಯ ಪದ್ಧತಿಯಂತೆಯೇ ನಡೆಯಬೇಕು, ಪದವಿ ಪೂರ್ವ ಶಿಕ್ಷಣ ಇಲಾಖೆಯು ಮಧ್ಯಂತರ ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ಮುಂದೂಡಬೇಕು ಮತ್ತು ಪಿಯು ಇಲಾಖೆಯೂ ಅಧ್ಯಾಪಕರಿಗೆ ಭೋದನೆಯನ್ನು ಹೊರತು ಪಡಿಸಿ ಬೇರೆ ಬೇರೆ ಕಾರ್ಯಗಳಿಗೆ ನಿಯೋಜನೆ ಮಾಡದೆ ಭೋಧನೆಗೆ ಮೊದಲ ಆದ್ಯತೆ ಕೊಡಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ ಎಂದರು.
ಈ ಸಂಧರ್ಭದಲ್ಲಿ ನಗರ ಕಾರ್ಯದರ್ಶಿ ಸಿದ್ದು ಪತ್ತಾರ, ಅಕ್ಷಯ ಯಾದವಾಡ, ಸಂತೋಷ ದೊಡಮನಿ, ಪಾಂಡು ಮೊರೆ, ಸಿದ್ದು ಉಪ್ಪಾರ, ದಿರಜ, ಮಂಜುನಾಥ ಹಳಿ,್ಳ ಬಸವರಾಜ ಪೂಜಾರಿ, ವóರ್ಷಾ ನಂದಿ, ಸುರೇಖಾ ಕುಲಕರ್ಣಿ, ಇತರರು ಉಪಸ್ಥಿತರಿದ್ದರು.