ಮದುವೆ ಸಮಾರಂಭದಲ್ಲಿ ಮಾಸ್ಕ್ ವಿತರಣೆ, ಜಾಗೃತಿ ಅಭಿಯಾನ

ಕಲಬುರಗಿ, ಮೇ 4 :ಮದುವೆಗೆ ಬಂದರೂ ಗುಡಿಯ ಒಳಗಡೆ ಬಿಡಲಿಲ್ಲ ಎಂಬುದು ವಿಚಿತ್ರವಾದರೂ ಸತ್ಯ. ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಂತೆ ಕಳೆದ ಸೋಮವಾರ ಅನುಮತಿ ಪಡೆದು ನಗರದ ಬಸವೇಶ್ವರ್ ಗುಡಿಯಲ್ಲಿ ಸಂತೋಷಕುಮಾರ್ ಅವರೊಂದಿಗೆ ಕೀರ್ತನಾ ಅವರ ಮದುವೆಯು ಅತ್ಯಂತ ಸರಳವಾಗಿ ಜರುಗಿತು. ನಗರದಲ್ಲಿಯೇ ಇದೊಂದು ಮಾದರಿ ಮದುವೆಯಾಗಿತ್ತು ಎನ್ನುತ್ತಾರೆ ವಚನೋತ್ಸವ ಪ್ರತಿಷ್ಠಾನದ ಶಿವರಾಜ್ ಅಂಡಗಿಯವರು.
ಮದುವೆಗೆ ಬಂದರೂ ಗುಡಿಯ ಒಳಗಡೆ ಬಿಡಲಿಲ್ಲ ಎಂಬುದು ವಿಚಿತ್ರವಾದರೂ ಅದು ಅವರಿಗೆ ಅನಿವಾರ್ಯ ಆಗಿತ್ತು. ಗುಡಿಯ ಬಾಗಿಲಿಗೆ ಸ್ವಾಮಿ ಅವರು ಮದುವೆಗೆ ಬರುವ ಬಂಧು, ಬಳಗದವರನ್ನು ಎಣಿಸಿ, ಎಣಿಸಿ ಒಳಗಡೆ ಬಿಟ್ಟರು. ಆ ವಿಶೇಷತೆಯನ್ನು ನೋಡಿದವರಿಗೆ ನಗು ತಡೆದುಕೊಳ್ಳಲಾಗಲಿಲ್ಲ.
ಸ್ವಲ್ಪ ತಡವಾಗಿ ಹೋದರೂ ಸಹ ನಾನು ಅದೃಷ್ಟವಂತ ನನ್ನ ನಂಬರ್ 43 ಆಗಿತ್ತು. ನಂತರ ಏಳು ಜನರನ್ನು ಬಿಟ್ಟ ನಂತರ ಬಾಗಿಲಿಗೆ ಕೀಲಿ ಹಾಕಿ ಒಳಗಡೆ ಮದುವೆ ಮಾಡಿದ್ದು ವಿನೂತನ ಹಾಗು ಒಂದು ಮಾದರಿ ಎಂದು ಅಂಡಗಿಯವರು ಬಣ್ಣಿಸಿದ್ದಾರೆ.
ಮದುವೆಗೆ ಬಂದ ಬಂಧು- ಬಳಗದವರಿಗೆ ಗುಡಿಯ ದ್ವಾರದ ಒಳಗಡೆಯಿಂದಲೇ ಮದುಮಗನ ತಂದೆ ಶರಣಪ್ಪ ಸೌಕಾರ್ ಕಲಗುರ್ತಿ ಅವರು ದಯಮಾಡಿ ಕ್ಷಮಿಸಿ ಎಂದು ಕ್ಷಮೆಯಾಚಿಸಿದ್ದೂ ಸಹ ಮತ್ತೊಂದು ವಿಶೇಷವಾಗಿತ್ತು. ಅವರ ಸಾಮಾಜಿಕ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿದ್ದಕ್ಕೆ ಸಾರ್ವಜನಿಕರ ಪರವಾಗಿ ಅಂಡಗಿ ಅವರು ಅಭಿನಂದಿಸಿದ್ದಾರೆ.
ಸಮೀಪದ ಔಷಧ ಅಂಗಡಿಯಲ್ಲಿದ್ದ ಮಾಸ್ಕ್ ತಂದು ವಧು, ವರರಿಗೂ, ಬಂಧು, ಬಳಗದವರಿಗೂ ವಿತರಿಸಲಾಯಿತು. ಊಟ ಮತ್ತು ನಿದ್ರೆ ಸಮಯ ಬಿಟ್ಟು ಉಳಿದ ಸಮಯದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತೇವೆ ಹಾಗೂ ನೀವು ಕೂಡ ಧರಿಸಬೇಕು ಎಂದು ಸಾಮೂಹಿಕವಾಗಿ ಪ್ರತಿಜ್ಞೆಯನ್ನೂ ಸಹ ಮಾಡಲಾಯಿತು.
ಜಾಗೃತಿ ಅಭಿಯಾನದಲ್ಲಿ ಡಾ. ಓಂಪ್ರಕಾಶ್ ಹೆಬ್ಬಾಳ್, ಶರಣಪ್ಪ ಸೌಕಾರ್ ಪಸಾರ್ ಕಲಗುರ್ತಿ, ನಾನಾಗೌಡ ಪಾಟೀಲ್, ಚಿತ್ರಶೇಖರ್ ಪಸಾರ್, ಶಿವಕುಮಾರ್ ಕೂಡ್ಲಿ ಹೊಡೆಬೀರನಳ್ಳಿ, ಶರಣು ಹಾವಪ್ಪನೋರ್ ಡೋಣ್ಣೂರ್, ಮಾಜಿ ಮೇಯರ್ ಧರ್ಮಪ್ರಕಾಶ್ ಪಾಟೀಲ್, ದಯಾನಂದ್ ಪಸಾರ್, ಮಲ್ಲಿಕಾರ್ಜುನ್ ಪಸಾರ್, ಬಸವರಾಜ್ ಪಸಾರ್, ಆನಂದ್ ಪಸಾರ್ ಮುಂತಾದವರು ಉಪಸ್ಥಿತರಿದ್ದರು.