ಮದುವೆ ಸಂಭ್ರಮದಲ್ಲಿದ್ದ ಯುವಕ ಕೊರೊನಾಗೆ ಬಲಿ

ತುಮಕೂರು, ಏ. 27- ಮದುವೆ ಸಂಭ್ರಮದಲ್ಲಿ ಮಿಂದೇಳಬೇಕಿದ್ದ ಯುವಕನೊಬ್ಬ ಕೊರೊನಾ ಮಹಾಮಾರಿಗೆ ಬಲಿಯಾಗಿರುವ ದುರಂತ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಾಲುಕಟ್ಟೆ ಗೊಲ್ಲರಟ್ಟಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕ ನಗರದ ಖಾಸಗಿ ಮೊಬೈಲ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ. ಯುವಕನಿಗೆ ನಾಲ್ಕು ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಿಗದೆ ಪರದಾಡಿ ತಿಪಟೂರಿಗೆ ತೆರಳಿದ್ದರು. ತಿಪಟೂರಲ್ಲೂ ಬೆಡ್ ಸಿಗದೆ ಹಾಸನದ ಮೆಡಿಕಲ್ ಕಾಲೇಜಿಗೆ ದಾಖಲು ಮಾಡಿದ್ದರು. ಆಸ್ಪತ್ರೆಗೆ ದಾಖಲಿಸಿದ ಅರ್ಧಗಂಟೆಯಲ್ಲೇ‌ ಯುವಕ ಕೊನೆಯುಸಿರೆಳೆದಿದ್ದಾನೆ.
ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿ ಬೆಡ್​ ಜೊತೆಗೆ ಚಿಕಿತ್ಸೆ ಸಿಕ್ಕಿದ್ದರೆ ಆತ ಬದುಕುಳಿಯುತ್ತಿದ್ದ ಎಂದು ಮೃತನ ಕುಟುಂಬಸ್ಥರು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

  ಇತ್ತೀಚೆಗಷ್ಟೆ ಯುವಕನ ಮದುವೆ ನಿಶ್ಚಯವಾಗಿದ್ದು, ಕುಟುಂಬಸ್ಥರು ಸಿದ್ಧತೆಯಲ್ಲಿ ತೊಡಗಿದ್ದರು. ಜವರಾಯ ಯುವಕನ ಪ್ರಾಣ ಹೊತ್ತೊಯ್ದಿದ್ದು, ಮೃತನ ಕುಟುಂಬಸ್ಥರಿಗೆ ದಿಕ್ಕುತೋಚದಂತಾಗಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಯುವಕನ ಮದುವೆ ಶೀಘ್ರದಲ್ಲೇ ನೆರವೇರುತ್ತಿತ್ತು.